ರಾಜ್ಯ

ಹೇಮಾವತಿ ಲಿಂಕ್ ಕೆನಾಲ್ ಯೋಜನೆ: ಪೈಪ್ ಗಳ ಖರೀದಿಗೆ 400 ಕೋಟಿ ರೂ ಬಿಡುಗಡೆ; ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣ!

ಸಮುದ್ರಕ್ಕೆ ಹರಿದು ಹೋಗುವ ನೀರನ್ನು ರೈತರ ಉಪಯೋಗಕ್ಕೆ ಬಳಸಿಕೊಳ್ಳಲು ಚಾನಲ್‌ಗಳ ಮೂಲಕ ನೀರು ಹರಿಸುವ ಕೆಲಸ ನಡೆಯಬೇಕು.

ಹೇಮಾವತಿ ಲಿಂಕ್ ಕೆನಾಲ್ ಯೋಜನೆ: ಪೈಪ್ ಗಳ ಖರೀದಿಗೆ 400 ಕೋಟಿ ರೂ ಬಿಡುಗಡೆ; ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣ!
ಡಿಸಿಎಂ ಡಿಕೆ ಶಿವಕುಮಾರ್
Published On :

ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಯೋಜನೆಯ ನೀರು ಹಂಚಿಕೆಯಲ್ಲಿ ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಜಲಸಂಪನ್ಮೂಲ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ಭರವಸೆ ನೀಡಿದರು.

ಸುಂಕಾಪುರ ಬಳಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಗುಬ್ಬಿ ಶ್ರೀನಿವಾಸ್, ಡಾ. ರಂಗನಾಥ್ ಹಾಗೂ ಅಧಿಕಾರಿಗಳ ಜೊತೆ ಪರಿಶೀಲಿಸಿದ ನಂತರ ಮಾಧ್ಯಮದವೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ತುಮಕೂರು ನನಗೆ ಅತ್ಯಂತ ಹತ್ತಿರವಾದ ಜಿಲ್ಲೆ. ಈ ಯೋಜನೆ ಒಂದು ಅಭಿವೃದ್ಧಿ ಕೆಲಸವಾಗಿದ್ದು, ಇದರಲ್ಲಿ ರಾಜಕೀಯ ಬೆರೆಸಬಾರದು. ತುಮಕೂರು ಜಿಲ್ಲೆಯ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಪೈಪ್‌ಗಳ ಖರೀದಿಗೆ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬಹುದು. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ರೈತರ ಉಪಯೋಗಕ್ಕೆ ಬಳಸಿಕೊಳ್ಳಲು ಚಾನಲ್‌ಗಳ ಮೂಲಕ ನೀರು ಹರಿಸುವ ಕೆಲಸ ನಡೆಯಬೇಕು. ನಾವು ಬೇರೆ ರಾಜ್ಯಗಳ ಜೊತೆ ನೀರಿಗಾಗಿ ಹೋರಾಟ ಮಾಡುವ ಹಾಗೆ ನಮ್ಮಲ್ಲೇ ಹೋರಾಟ ಮಾಡುವುದು ಬೇಡ. ನಾವೆಲ್ಲರೂ ಒಂದೇ ರಾಜ್ಯದವರು, ರಕ್ತ ಮತ್ತು ಸಂಬಂಧಗಳನ್ನು ಹಂಚಿಕೊಂಡಿದ್ದೇವೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು ಎಂದು ಹೋರಾಟಗಾರರಿಗೆ ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಈ ಯೋಜನೆಗೆ ಮಂಜೂರಾತಿ ನೀಡಲಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಆಗ ಕೇವಲ 600 ಕೋಟಿ ರೂ.ಗಳಲ್ಲಿ ಮುಗಿಯಬೇಕಿದ್ದ ಈ ಕಾಮಗಾರಿಯ ವೆಚ್ಚ ಈಗ 1000 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ಒಂದು ತಾಲ್ಲೂಕಿಗೆ ಎಷ್ಟು ನೀರು ಒದಗಿಸಲಾಗಿದೆಯೋ ಅಷ್ಟನ್ನೇ ಬಳಸಿಕೊಳ್ಳಲು ಅವಕಾಶವಿದೆ. ಯಾವುದೇ ಅನಧಿಕೃತ ಗೇಟ್‌ಗಳನ್ನು ಹಾಕಲು ಅವಕಾಶವಿಲ್ಲ. 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಎಂಬ ತತ್ವದ ಮೇಲೆ ನಾವು ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.