ರಾಜ್ಯ

ಏಕಪಕ್ಷೀಯ ನಿರ್ಧಾರ ಸರಿಯಲ್ಲ: ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ನಾಟಕ ವಿಧಾನ ಮಂಡಲದಲ್ಲಿ ಕರ್ನಾಟಕ ವಿಧಾನ ಪರಿಷತ್ತು ಮತ್ತು ಕರ್ನಾಟಕ ವಿಧಾನ ಸಭೆ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ನನ್ನ ಅಭಿಪ್ರಾಯ ಹಾಗೂ ತಮ್ಮ ಅಭಿಪ್ರಾಯವು ಆಗಿದೆ ಎಂದು ಭಾವಿಸಿರುತ್ತೇನೆ.

ಏಕಪಕ್ಷೀಯ ನಿರ್ಧಾರ ಸರಿಯಲ್ಲ: ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ
ಯು.ಟಿ.ಖಾದರ್ ಮತ್ತು ಬಸವರಾಜ ಹೊರಟ್ಟಿ
Published On :

ಬೆಂಗಳೂರು: ವಿಧಾನಸೌಧಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಅಥವಾ ಕಾರ್ಯಕ್ರಮಗಳ ಕುರಿತು ತಮ್ಮೊಂದಿಗೆ ಸಮಾಲೋಚನೆ ನಡೆಸದೆಯೇ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಈ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ವಿಧಾನ ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಖಾದರ್ ಅವರಿಗೆ ಪತ್ರ ಬರೆದಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ನಾಟಕ ವಿಧಾನ ಮಂಡಲದಲ್ಲಿ ಕರ್ನಾಟಕ ವಿಧಾನ ಪರಿಷತ್ತು ಮತ್ತು ಕರ್ನಾಟಕ ವಿಧಾನ ಸಭೆ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ನನ್ನ ಅಭಿಪ್ರಾಯ ಹಾಗೂ ತಮ್ಮ ಅಭಿಪ್ರಾಯವು ಆಗಿದೆ ಎಂದು ಭಾವಿಸಿರುತ್ತೇನೆ. ದ್ವಿಸದನ ಇರುವ ರಾಜ್ಯದಲ್ಲಿ ವಿಧಾನ ಮಂಡಲದಿಂದ ನಡೆಯುವ ಸಚಿವಾಲಯದ ಕಛೇರಿ ಕಾರ್ಯಕ್ರಮಗಳು ಸಹ ಇದೇ ದೃಷ್ಟಿಯಲ್ಲಿ ಹಾಗೂ ದಿಕ್ಕಿನಲ್ಲಿ ಸಾಗಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾದ ನನ್ನನ್ನು ಸೌಜನ್ಯಕ್ಕಾದರು ಅಧಿಕೃತ ಕಾರ್ಯಕ್ರಮದ ಬಗ್ಗೆ ರೂಪರೇಷಗಳನ್ನು ಸಿದ್ಧಪಡಿಸಲು ಸಂಪರ್ಕಿಸದೆ ಏಕಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಉದಾಹರಣೆಗೆ ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ತಾವು ಪುಸ್ತಕ ಮೇಳವನ್ನು ಆಯೋಜಿಸಿದ್ದು, ವಿಧಾನಸೌಧ ಕಟ್ಟಡಕ್ಕೆ ಲೇಸರ್ ದೀಪ ಅಳವಡಿಸುವ ಯೋಜನೆ, 11 ನೇ ಸಿಪಿಎ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಷಿಯೇಷನ್, ಭಾರತ ವಲಯದ ಸಮ್ಮೇಳನ ಆಯೋಜನೆ ಬಗ್ಗೆ ಮೇಲಿನ ಕಾರ್ಯಕ್ರಮಗಳ ರೂಪರೇಷೆಗಳನ್ನು ಮಾಡುವಲ್ಲಿ ನನ್ನನ್ನು ಸೌಜನ್ಯಕ್ಕಾದರು ಸಂಪರ್ಕಿಸಿ ಸಲಹೆ ಸೂಚನೆ ಕೇಳದೆ ಮುಂದುವರೆದು ಸದರಿ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಗೋಷ್ಠಿಯನ್ನು ಏಕಪಕ್ಷಿಯವಾಗಿ ನಡೆಸುತ್ತಿರುವುದು ನಾನು ಮಾಧ್ಯಮಗಳ ಮೂಲಕ ಗಮನಿಸಿರುವೆ.

ಇದರ ಪರಿಣಾಮವಾಗಿ ನನ್ನ ಸುದೀರ್ಘ ರಾಜಕೀಯ ಹಿನ್ನಲೆ ಹಾಗೂ ಅನ್ಯ ರಾಜ್ಯಗಳ ಪೀಠಾಸೀನಾಧಿಕಾರಿಗಳ ನಿಕಟ ಸಂಪರ್ಕದಿಂದ ಹೊರ ರಾಜ್ಯದ ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಪೀಠಾಸೀನಾಧಿಕಾರಿಗಳು, ಶಾಸಕರು ಹಾಗೂ ಗಣ್ಯರುಗಳೊಂದಿಗೆ 11 ನೇ ಸಿಪಿಎ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಷಿಯೇಷನ್‌ಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಹಾಗೂ ಆತ್ಮೀಯ ಮಾಹಿತಿ ವಿನಿಮಯ ಮಾಡುವಲ್ಲಿ ಮುಜುಗರ ಉಂಟಾಗುತ್ತಿದೆ.

ಇತ್ತೀಚೆಗೆ ತಾವು ಬಾರ್ಬಡೊಸ್ ನಲ್ಲಿ ನಡೆಯುವ ಕಾಮನ್‌ವೆಲ್ತ್ ಕಾನ್ಸರೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 21 ದಿನಗಳ ಅಧಿಕೃತ ಪ್ರವಾಸ ಪಟ್ಟಿಯನ್ನು ನನ್ನ ಸಲಹೆಯನ್ನು ಪಡೆಯದೆ ತಾವು ತಯಾರಿಸಿದ್ದು ಅನ್ಯ ಮೂಲಗಳಿಂದ ತಿಳಿದಿರುವುದು ಅತ್ಯಂತ ಖೇಧಕರ ಸಂಗತಿಯಾಗಿದೆ.

ನಾನು ಅಧಿಕೃತ ಕಾರ್ಯಕ್ರಮದಲ್ಲಿ ಅಧ್ಯಯನ ಪ್ರವಾಸ ಯಾವ ದೇಶಕ್ಕೆ ಹೋಗಬೇಕು ಎಂದು ನಿರ್ಧರಿಸುವ ಹಕ್ಕು ಇಲ್ಲವೆಂದು ಭಾಸವಾಗುತ್ತಿದೆ. ನಿಮಗೆ ಅನುಕೂಲವಾಗುವ ರೀತಿ ಕಾರ್ಯಕ್ರಮವನ್ನು ನಿರೂಪಿಸಿ ಒತ್ತಾಯ ಪೂರ್ವಕವಾಗಿ ನಾನು ಅದರಲ್ಲಿ ಭಾಗವಹಿಸುವಂತೆ ಮಾಡುವ ಸಂದಿಗ್ಧತೆಯ ಅವಶ್ಯಕತೆ ಏನು ಎನ್ನುವುದು ನನಗೆ ಒಗಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊರಟ್ಟಿಯವರ ಪತ್ರ ಕುರಿತುತ ಪ್ರತಿಕ್ರಿಯೆ ನೀಡಿರುವ ಖಾದರ್ ಅವರು, ಹೊರಟ್ಟಿ ನನ್ನ ಪ್ರತಿರೂಪ ಮಾತ್ರವಲ್ಲ, ನನ್ನ ಹಿರಿಯ. ನನಗೆ ಅವರ ಬಗ್ಗೆ ಹೆಚ್ಚಿನ ಗೌರವವಿದೆ ಮತ್ತು ನಾನು ಅವರನ್ನು ನಿರ್ಲಕ್ಷಿಸಿಲ್ಲ. ನಾವು ಅವರಿಗೆ ಪ್ರಾಮುಖ್ಯತೆ ನೀಡಿದ್ದೇವೆ. ನನಗೆ ನೆನಪಿರುವಂತೆ, ನಾವು ಮಳೆಗಾಲದ ಅಧಿವೇಶನಕ್ಕೂ ಮೊದಲು ಅವರ ಕಚೇರಿಯಲ್ಲಿ ಸಿಪಿಎ ಸಭೆಯನ್ನು ನಡೆಸಿದ್ದೆವು. "ನಂತರ, ಅಧಿವೇಶನದ ಕಾರಣ ನಾವು ಭೇಟಿಯಾಗಲು ಸಾಧ್ಯವಾಗಲಿಲ್ಲ, ನಂತರ ನಾನು 12 ದಿನಗಳ ಕಾಲ ಅಮೆರಿಕಕ್ಕೆ ಹೋಗಿದ್ದೆ. ವಿಧಾನಸಭೆ ಮತ್ತು ಪರಿಷತ್ತಿನ ಕಾರ್ಯದರ್ಶಿಗಳು ಲೋಕಸಭಾ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಹೊರಟ್ಟಿ ದೇಶದಿಂದ ಹೊರಗಿದ್ದಾರೆ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಅವರು ಹಿಂದಿರುಗಿದ ನಂತರ, ನಾನು ಅವರೊಂದಿಗೆ ಮತ್ತೆ ಮಾತನಾಡುತ್ತೇನೆಂದು ಹೇಳಿದ್ದಾರೆ.

ಏತನ್ಮಧ್ಯೆ, ಖಾದರ್ ಅವರಿಗೆ ಹೊರಟ್ಟಿಗೆ ಪತ್ರ ಬರೆದಿದ್ದು, ಪುಸ್ತಕ ಮೇಳದ ರೂಪುರೇಷೆ ತಮ್ಮ ಗಮನಕ್ಕೆ ತರಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು ಉದ್ಘಾಟಿಸಿದ್ದು ನಮ್ಮಿಬ್ಬರ ಜಂಟಿ ಅಧ್ಯಕ್ಷತೆಯಲ್ಲಿ ನಡೆಯಿತು. ವಿಧಾನಸೌಧ ಕಟ್ಟಡಕ್ಕೆ ಲೇಸರ್ ದೀಪ ಅಳವಡಿಸುವ ಬಗ್ಗೆ ನಾನು ಕಾಳಜಿ ವ್ಯಕ್ತಪಡಿಸಿದ್ದೆ. ಈ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದೆ. ಅವರ ಆಸಕ್ತಿಯಿಂದ ಮುಖ್ಯಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯ ನೆರವೇರಿದೆ.

11 ನೇ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಭಾರತ ವಲಯ ಸಮ್ಮೇಳನಕ್ಕೆ ಲೋಕಸಭೆಯಿಂದ ಕೋರಿಕೆ ಬಂದಿದ್ದು ನಾವಿಬ್ಬರೂ ಸೇರಿ ಒಪ್ಪಿಗೆ ನೀಡಿದ್ದೇವೆ. ನಾನೇ ನಿಮ್ಮ ಕೊಠಡಿಗೆ ಬಂದು ಪರಸ್ಪರ ಚರ್ಚಿಸಿದ ನಂತರ ಅಧಿವೇಶನ ನಡೆಸಲು ನಿರ್ಧಾರ ತೆಗೆದುಕೊಂಡೆವು. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿಲ್ಲ ಸುದ್ದಿಗಾರರ ಪ್ರಶ್ನೆಗಳಿಗೆ ಮಾಹಿತಿ ನೀಡಿದ್ದೇನೆ ಅಷ್ಟೇ. ಬಾರ್ಬಡೋಸ್‌ನಲ್ಲಿ ನಡೆಯುವ 68 ನೇ ಕಾಮನ್‌ವೆಲ್ತ್‌ ಪಾರ್ಲಿಮೆಂಟರಿ ಕಾನ್ಫರೆನ್ಸ್‌ಗೆ ವಿಧಾನಸಭಾ ಕಾರ್ಯದರ್ಶಿ ಸಲ್ಲಿಸಿದ ಕಡತದಲ್ಲಿ ತಾವು ಪ್ರತಿನಿಧಿಯಾಗಿ ನಾನು ವೀಕ್ಷಕನಾಗಿ ಭಾಗವಹಿಸಲು ನಾವಿಬ್ಬರೂ ಒಪ್ಪಿಗೆ ನೀಡಿದ್ದೇವೆ. ನನ್ನ ಆಪ್ತ ಕಾರ್ಯದರ್ಶಿಗೆ ಪ್ರವಾಸದ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸಲು ತಿಳಿಸಿದ್ದೆ. ಈ ವಿಚಾರ ತಮಗೂ ಹಾಗೂ ತಮ್ಮ ಇಲಾಖಾ/ ಆಪ್ತ ಕಾರ್ಯದರ್ಶಿಗೆ ಅವರಿಗೆ ವಿವರಿಸಿರುತ್ತಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.