ಕಂಬಳ ಕ್ರೀಡೆಗೆ ಬಜೆಟ್‌ನಲ್ಲಿ 2 ಕೋಟಿ ರೂ ಅನುದಾನ ಮೀಸಲಿಡಿ: ಅಸೋಸಿಯೇಷನ್ ಒತ್ತಾಯ
ಕಂಬಳ ಸಂಘವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಕ್ರೀಡಾ ಸಂಸ್ಥೆಯಾಗಿ ಮಾನ್ಯತೆ ಪಡೆದಿದೆ. ಇದರೊಂದಿಗೆ, ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಗುರುತಿಸಲಾಗಿದೆ.

ಮಂಗಳೂರು: ಕಂಬಳ ಕ್ರೀಡೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲೇ ಕನಿಷ್ಠ 2 ಕೋಟಿ ರೂ.ಅನುದಾನ ಮೀಸಲಿಡಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಶನಿವಾರ ಒತ್ತಾಯಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅವರು, ಕಂಬಳ ಸಂಘವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಕ್ರೀಡಾ ಸಂಸ್ಥೆಯಾಗಿ ಮಾನ್ಯತೆ ಪಡೆದಿದೆ. ಇದರೊಂದಿಗೆ, ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಗುರುತಿಸಲಾಗಿದೆ. ಇದು ನೆರೆಯ ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳ ಸಾಂಪ್ರದಾಯಿಕ ಕ್ರೀಡೆಯಾಗಿದೆ ಎಂದು ಹೇಳಿದರು.
ಈ ವರ್ಷ, ನವೆಂಬರ್ 15 ರಿಂದ ಪ್ರಾರಂಭವಾಗುವ 25 ಕಂಬಳ ಕಾರ್ಯಕ್ರಮಗಳನ್ನು ನಾವು ಯೋಜಿಸಿದ್ದೇವೆ. ಹರೇಕಳ ಮತ್ತು ಬಡಗಬೆಟ್ಟುವಿನಲ್ಲಿ ಎರಡು ಹೊಸ ಕಂಬಳ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಹೀಗಾಗಿ ಪ್ರತಿ ಕಂಬಳಕ್ಕೆ 8 ಲಕ್ಷ ರೂ.ಗಳಂತೆ ಬಜೆಟ್‌ನಲ್ಲಿ 2 ಕೋಟಿ ರೂ.ಗಳನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ, ಐಪಿಎಲ್ ಮಾದರಿಯಲ್ಲಿ ಕಂಬಳ ಕಾರ್ಯಕ್ರಮಗಳಿಗೆ ಪ್ರಾಯೋಜಕರನ್ನು ಕರೆತರುವ ಯೋಜನೆಯೂ ಇದೆ ಎಂದು ತಿಳಿಸಿದರು.
ಕಂಬಳ ಸಂದರ್ಭದಲ್ಲಿ ಕೋಣಗಳಿಗೆ ಹಿಂಸೆ ನೀಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸುತ್ತೇವೆ. ನಮ್ಮ ಅಸೋಸಿಯೇಷನ್ ಜೊತೆಗೆ ಪೊಲೀಸ್ ಇಲಾಖೆ ಪಶುಸಂಗೋಪನಾ ಇಲಾಖೆಗಳೂ ಈ ಬಗ್ಗೆ ಕಣ್ಗಾವಲು ಇಡಲಿವೆ. ಕಂಬಳದ ಆಯೋಜಕರು ಮತ್ತು ಭಾಗವಹಿಸುವವರು ನಿರ್ದಿಷ್ಟ ಸಮಯದ ಚೌಕಟ್ಟನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಇದನ್ನೂ ಮೀರಿಯೂ ಕೋಣಗಳಿಗೆ ಹಿಂಸೆ ನೀಡಿದ್ದು ಕಂಡು ಬಂದರೆ ಅಂತಹ ಕಂಬಳಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಲಿದ್ದೇವೆ. ಕಂಬಳ ಆಯೋಜಿಸುವವರು ಪಾಲಿಸ ಬೇಕಾದ ನಿಯಮಗಳ ಕುರಿತು ಪುಸ್ತಕವನ್ನೇ ಸಿದ್ಧಪಡಿಸಲಿದ್ದೇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳ ಕ್ರೀಡೆಗೆ ಬಜೆಟ್ ಹಂಚಿಕೆ ಕುರಿತು ಬೈಲಾವನ್ನು ರೂಪಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಭಾಗವಹಿಸುವವರು ಮತ್ತು ಸಂಘಟಕರು ಅನುಸರಿಸಬೇಕಾದ ನಿಯಮ ಪುಸ್ತಕವನ್ನು ಸಂಘವು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



