Breakfast ಮೀಟಿಂಗ್: ಫೋಟೋ ಹಂಚಿಕೊಂಡು ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟು ಪ್ರದರ್ಶನ
ತೀವ್ರ ಗೊಂದಲ ಹುಟ್ಟುಹಾಕಿರುವ ಕುರ್ಚಿ ಗುದ್ದಾಟವನ್ನು ಹೈಕಮಾಂಡೇ ಬಗೆಹರಿಸಲಿದೆ ಎಂದು ಇಡೀ ಕಾಂಗ್ರೆಸ್ ಸಮೂಹ ಕಾದು ಕುಳಿತಿರುವ ಈ ಹಂತದಲ್ಲಿ ಪರಸ್ಪರ ಭೇಟಿ ಮಾಡಿ ಹೊಂದಾಣಿಕೆಗೆ ಪ್ರಯತ್ನಿಸಿ ಎಂಬ ಸ೦ದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ನೀಡಿದೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಈ ನಡುವಲ್ಲೇ ಉಪಹಾರ ಸಭೆ ಸೇರಿರುವ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಈ ಕುರಿತ ಫೋಟೋ ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಬೆಳಗ್ಗಿನ ಉಪಹಾರ ಸೇವಿಸುತ್ತಾ, ಕೆಲಹೊತ್ತು ಮಾತುಕತೆ ನಡೆಸಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಇಬ್ಬರೂ ಉಪಹಾರ ಸೇವಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದರಂತೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರೂ ಪೋಸ್ಟ್ ಮಾಡಿದ್ದು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಇಂದು ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಉಪಾಹಾರ ಸಭೆ ನಡೆಸಲಾಯಿತು ಎಂದು ಹೇಳಿ, ಫೋಟೋವನ್ನು ಹಂಚಿಕೊಂಡಿದ್ದಾರೆ.
ತೀವ್ರ ಗೊಂದಲ ಹುಟ್ಟುಹಾಕಿರುವ ಕುರ್ಚಿ ಗುದ್ದಾಟವನ್ನು ಹೈಕಮಾಂಡೇ ಬಗೆಹರಿಸಲಿದೆ ಎಂದು ಇಡೀ ಕಾಂಗ್ರೆಸ್ ಸಮೂಹ ಕಾದು ಕುಳಿತಿರುವ ಈ ಹಂತದಲ್ಲಿ ಪರಸ್ಪರ ಭೇಟಿ ಮಾಡಿ ಹೊಂದಾಣಿಕೆಗೆ ಪ್ರಯತ್ನಿಸಿ ಎಂಬ ಸ೦ದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ನೀಡಿದ್ದು, ಅದರಂತೆ ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯುತ್ತಿದೆ.
ರಾಜ್ಯ ಬಿಕ್ಕಟ್ಟಿನ ಬಗ್ಗೆ ತನ್ನ ಅಂತಿಮ ನಿಲುವು ಪ್ರಕಟಿಸುವ ಮುನ್ನ ಉಭಯ ನಾಯಕರು ಹೊಂದಾಣಿಕೆಗೆ ಅಂತಿಮ ಯತ್ನ ನಡೆಸಲಿ ಎಂಬ ಉದ್ದೇಶದಿಂದ ಹೈಕಮಾಂಡ್ ಈ ನಿಲುವು ತಳೆದಂತಿದ್ದು, ಹೀಗಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಉಪಾಹಾರ ಸಭೆ ನಡೆಯುತ್ತಿದೆ.
ಹೀಗಾಗಿ ಪಟ್ಟು ಸಡಿಲಿಸಲೊಪ್ಪದ ಉಭಯ ನಾಯಕರ ನಡುವೆ ಕುರ್ಚಿ ವಿಚಾರದಲ್ಲಿ ಹೊಂದಾಣಿಕೆ ಸಾಧ್ಯವಾಗದಿದ್ದರೂ ಪಕ್ಷದಲ್ಲಿ ಒಗ್ಗಟ್ಟು ಇದೆ ಎಂಬ ಸಂದೇಶ ರವಾನೆಯಾಗಲಿದೆ ಎಂಬ ಉದ್ದೇಶದಿಂದ ಈ ಸಭೆ ಆಯೋಜನೆಗೆ ಹೈಕಮಾಂಡ್ ನಿರ್ದೇಶನ ನೀಡಿದೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



