News Headlines 28-11-25 | ಮೋದಿಗೆ 'ಭಾರತ ಭಾಗ್ಯ ವಿಧಾತ' ಬಿರುದು; ಪುನೀತ್ ಕೆರೆಹಳ್ಳಿಗೆ ಸನ್ಮಾನ: ಸಂತೋಷ್ ಹೆಗ್ಡೆ ವಿಷಾದ; ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ- PM ಗೆ ಸಿಎಂ ಮನವಿ!

1. ಮೋದಿಗೆ 'ಭಾರತ ಭಾಗ್ಯ ವಿಧಾತ' ಬಿರುದು
ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಉಡುಪಿ ಹೆಲಿಪ್ಯಾಡ್ ಗೆ ಬಂದಿಳಿದ ನಂತರ ಉಡುಪಿಯಿಂದ ಕೃಷ್ಣಮಠದವರೆಗೂ ರೋಡ್ ಶೋ ನಡೆದಿದ್ದು ಜನರು ಹೂಮಳೆ ಸುರಿಸಿ ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದರು. ನಂತರ ಶ್ರೀಕೃಷ್ಣನ ದರ್ಶನ ಪಡೆದ ಮೋದಿ ಸುವರ್ಣ ಕನಕನ ಕಿಂಡಿ ಉದ್ಘಾಟಿಸಿದರು. ಅಲ್ಲಿಂದ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಜೊತೆ 'ಲಕ್ಷಕಂಠ ಗೀತಾ ಪಾರಾಯಣ' ಸಭಾಂಗಣಕ್ಕೆ ಆಗಮಿಸಿದ ಮೋದಿ ಅಲ್ಲಿ ಲಕ್ಷಕ್ಕೂ ಅಧಿಕ ಭಕ್ತರ ಜೊತೆ ಭಗವದ್ಗೀತೆ ಪಠಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು, ಭಾರತ ಭಾಗ್ಯ ವಿದಾತ ಬಿರುದು ನೀಡಿ ಸನ್ಮಾನಿಸಿದರು. ಈ ವೇಳೆ ಕಾಶಿ ಕಾರಿಡಾರ್ ರೀತಿಯಲ್ಲಿ ಉಡುಪಿ ಕಾರಿಡಾರ್ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು.
2. ದೇಶದ ಜನತೆಗೆ ನವ ಸಂಕಲ್ಪ ಮಾಡುವಂತೆ ಪ್ರಧಾನಿ ಮೋದಿ ಕರೆ
ಉಡುಪಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಹಿಂದಿನ ಸರ್ಕಾರಗಳು ಭಯೋತ್ಪಾದಕ ದಾಳಿಯ ನಂತರ ಸುಮ್ಮನೆ ಕುಳಿತುಕೊಳ್ಳುತ್ತಿದ್ದವು. ಆದರೆ ನವ ಭಾರತ ತನ್ನ ಜನರನ್ನು ರಕ್ಷಿಸಲು ಬದ್ಧವಾಗಿದೆ. ಯಾರ ಮುಂದೆಯೂ ತಲೆಬಾಗುವುದಿಲ್ಲ ಅಥವಾ ಹಿಂಜರಿಯುವುದಿಲ್ಲ ಎಂದು ಹೇಳಿದರು. ನವ ಸಂಕಲ್ಪದ ಮನವಿ ಮಾಡಿ ಅವರು, ಈ ನವ ಸಂಕಲ್ಪ ವರ್ತಮಾನ ಮತ್ತು ಭವಿಷ್ಯಕ್ಕೆ ಅಗತ್ಯ ಎಂದು ಪ್ರತಿಪಾದಿಸಿದರು. 'ಜಲ ಸಂರಕ್ಷಣೆ'. ನೀರಿಲ್ಲದೆ ಜೀವನ ಇಲ್ಲ, ಮರ ಬೆಳೆಸುವುದು, ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸುವಂತೆ ಸೂಚಿದರು. ರೈತರೇ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ. ವೋಕಲ್–ಲೋಕಲ್ ಮಂತ್ರ ನಮ್ಮದಾಗಲಿದೆ ಎಂದರು. 'ಸ್ವದೇಶಿ ವಸ್ತುಗಳ ಬಳಕೆ'ಗೆ ಒತ್ತು. ಆರೋಗ್ಯಪೂರ್ಣ ಜೀವನ ಶೈಲಿ, ಫಿಟ್ ಆಗಿರೋಕೆ 'ಯೋಗ' ಮಾಡಿ, ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡಿ, ಕನಿಷ್ಠ ಪಕ್ಷ ದೇಶದ 25 ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಮಾಡುವಂತೆ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದರು.
3. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ
ಉಡುಪಿ ಭೇಟಿ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಚಿವ ದಿನೇಶ್ ಗುಂಡೂರಾವ್ ಮನವಿ ಪತ್ರ ಸಲ್ಲಿಸಿದರು. ರಾಜ್ಯದ ಮೆಕ್ಕೆಜೋಳ ಹಾಗೂ ಹೆಸರುಕಾಳು ಬೆಳೆಗಾರರು ಮಾರುಕಟ್ಟೆ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರವು ತಕ್ಷಣ ಮಧ್ಯಪ್ರವೇಶ ಮಾಡಿ ಕನಿಷ್ಠ ಬೆಂಬಲ ಬೆಲೆ, ಎಥೆನಾಲ್ ಹಂಚಿಕೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ, ರೈತರಿಗೆ ದೊರೆಕಬೇಕಾದ ನ್ಯಾಯಯುತ ಬೆಲೆ ಸಿಗುವಂತೆ ಮಾಡಬೇಕೆಂದು ಪ್ರಧಾನಿ ಮೋದಿಯವರಿಗೆ ಪತ್ರದ ಮೂಲಕ ಒತ್ತಾಯಿಸಲಾಗಿದೆ. ಪ್ರಧಾನಿ ಮೋದಿ ಅವರು ತಕ್ಷಣ ರಾಜ್ಯದ ರೈತರ ಕಷ್ಟವನ್ನು ಅರ್ಥೈಸಿಕೊಂಡು, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಭಾವಿಸಿದ್ದೇನೆಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
4. ಪುನೀತ್ ಕೆರೆಹಳ್ಳಿಗೆ ಸನ್ಮಾನ: ಸಂತೋಷ್ ಹೆಗ್ಡೆ ವಿಷಾದ
ಖಾಸಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಸನ್ಮಾನ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು ಸಂತೋಷ್ ಹೆಗ್ಡೆ ಅವರ ನಡೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪುನೀತ್ ಕೆರೆಹಳ್ಳಿಗೆ ಸಂತೋಷ್ ಹೆಗ್ಡೆ ಅವರು ಶಾಲು ಪೇಟ ಹೊದಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದರು. ಕ್ರಿಮಿನಲ್ ಹಿನ್ನಲೆ ಹೊಂದಿರುವ ವ್ಯಕ್ತಿಗೆ ಸನ್ಮಾನ ಮಾಡಿದ್ದೀರೀ. ಆತನ ಹಿನ್ನೆಲೆ ಏನು ಅಂತಾ ಗೊತ್ತಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ. ತಮ್ಮ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸಂತೋಷ್ ಹೆಗ್ಡೆ ಅವರು ಪ್ರತಿಕ್ರಿಯಿಸಿದ್ದು, ಪ್ರಶಸ್ತಿಯನ್ನು 15-20 ಜನರು ಪಡೆದಿದ್ದಾರೆ ಮತ್ತು ಅವರಲ್ಲಿ ಒಬ್ಬ ಕೊಲೆ ಆರೋಪಿ ಎಂದು ತನಗೆ ತಿಳಿದಿರಲಿಲ್ಲ, ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
5. ಇನ್ಮುಂದೆ ಮೈಸೂರು ಮಹಾನಗರ ಪಾಲಿಕೆ ಗ್ರೇಟರ್ ಮೈಸೂರು
ಗ್ರೇಟರ್ ಬೆಂಗಳೂರಿನಂತೆ ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಮೈಸೂರು ಸಿಟಿ ಕಾರ್ಪೊರೇಷನ್ ಆಗಿ ಪರಿವರ್ತಿಸಲು ರಾಜ್ಯ ಸಂಪುಟ ಅನುಮೋದನೆ ನೀಡಿದೆ. 'ಕೆಲವು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕೆಲವು ಹಳ್ಳಿಗಳನ್ನು ಮೈಸೂರು ಮಹಾನಗರ ಪಾಲಿಕೆ ನಿಗಮಗೆ ಸೇರಿಸುವ ಮೂಲಕ, ಅದನ್ನು 'ಬೃಹತ್ ಮೈಸೂರು ಮಹಾನಗರ ಪಾಲಿಕೆ' (ಗ್ರೇಟರ್ ಮೈಸೂರು ಸಿಟಿ ಕಾರ್ಪೊರೇಷನ್) ಆಗಿ ಪರಿವರ್ತಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


