ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!
ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ.

ಬೆಂಗಳೂರು: ರಾಜ್ಯದ ನಂದಿನಿ ತುಪ್ಪಕ್ಕೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಬೇಡಿಕೆಗಳು ಹೆಚ್ಚಾಗಿವೆ. ನಂದಿನಿ ಬ್ರ್ಯಾಂಡ್ ತುಪ್ಪವನ್ನು ಇದೀಗ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಸೌದಿ ಅರೇಬಿಯಾ ರಾಷ್ಟ್ರಕ್ಕೂ ರಫ್ತು ಮಾಡಲಾಗುತ್ತಿದೆ.
ನಂದಿನಿ ಉತ್ಪನ್ನಗಳು ತಮ್ಮ ಮಾರ್ಕೆಟ್ ವಿಸ್ತರಣೆ ಮಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಕಾವೇರಿ ನಿವಾಸದಲ್ಲಿ ಮಾತನಾಡಿ ಮುಖ್ಯಮಂತ್ರಿಗಳು, “ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ ಎಂದು ಹೇಳಿದರು.
ಕನ್ನಡದ ಅಪ್ಪಟ ಬ್ರ್ಯಾಂಡ್ ನಂದಿನಿಯ ಘಮಲು ಜಗದಗಲ ವ್ಯಾಪಿಸುತ್ತಿದೆ. ಪ್ರಸ್ತುತ ದುಬೈ, ಕತಾರ್, ಬ್ರುನೈ, ಮಾಲ್ಡೀವ್ಸ್ ಹಾಗೂ ಸಿಂಗಾಪುರ್ ದೇಶಗಳು ಸೇರಿದಂತೆ ಭಾರತೀಯರು, ವಿಶೇಷವಾಗಿ ಕನ್ನಡಿಗರು ಹೆಚ್ಚಾಗಿ ನೆಲೆಸಿರುವ ನೆರೆಯ ರಾಷ್ಟ್ರಗಳಲ್ಲಿ ನಂದಿನಿ ಬ್ರ್ಯಾಂಡ್‌ಗೆ ಡಿಮ್ಯಾಂಡ್ ಹೆಚ್ಚಿದೆ. ಹೀಗಾಗಿಯೇ ನಂದಿನಿ ಯುಹೆಚ್‌ಟಿ ಟೆಟ್ರಾಪ್ಯಾಕ್ ಹಾಲು, ತುಪ್ಪ, ಚೀಸ್, ಬೆಣ್ಣೆ, ಐಸ್‌ಕ್ರೀಂ, ಸುವಾಸಿತ ಹಾಲು, ಸಿಹಿ ಉತ್ಪನ್ನ, ಸೇವರಿಸ್ ಅನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಇದೀಗ ವಿದೇಶದಲ್ಲೂ ಮಾರುಕಟ್ಟೆ ವಿಸ್ತರಣೆ ಮಾಡಲು ಕೆಎಂಎಫ್ ಕ್ರಮ ವಹಿಸಿದೆ.
2023ರ ಸೆಪ್ಟೆಂಬರ್ 9ರಂದು ಯುನೈಟೆಡ್ ಅರಬ್ ಎಮಿರೇಟ್ಸ್ (ದುಬೈ)ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೊದಲ ʼನಂದಿನಿ ಕೆಫೆ ಮೂʼ ಅನ್ನು ಆರಂಭಿಸಿ, ತುಪ್ಪ, ಬೆಣ್ಣೆ, ಚೀಸ್, ಯುಹೆಚ್‌ಟಿ ಹಾಲು, ಐಸ್‌ಕ್ರೀಂ, ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು. ಅಲ್ಲಿ ನೆಲೆಸಿರುವ ಕನ್ನಡಿಗರು ಸೇರಿದಂತೆ ಅಲ್ಲಿನ ಪ್ರಜೆಗಳು ಕೂಡ ನಮ್ಮ ಕನ್ನಡದ ಬ್ರ್ಯಾಂಡ್ ಉತ್ಪನ್ನಗಳನ್ನು ಕೊಳ್ಳಲು ಪ್ರಾರಂಭಿಸಿದ್ದರಿಂದ ಮಾರುಕಟ್ಟೆ ವಿಸ್ತರಣೆಯಾಯಿತು.
ಬಳಿಕ 2025ರ ಆಗಸ್ಟ್ 29 ರಿಂದ ಆಗಸ್ಟ್ 31ರ ವರೆಗೆ ಯುಎಸ್‌ಎಯಲ್ಲಿನ ಲೇಕ್‌ಲ್ಯಾಂಟ್ ಪ್ಲೋರಿಡಾದಲ್ಲಿ ಆಯೋಜಿಸಲಾಗಿದ್ದ ನಾವಿಕ (ನಾವು ವಿಶ್ವ ಕನ್ನಡಿಗರು) ವಿಶ್ವ ಕನ್ನಡ ಸಮಾವೇಶದಲ್ಲಿ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕರು ಪಾಲ್ಗೊಂಡು ಹೊಸ ವಿನ್ಯಾಸದ ನಂದಿನಿ ತುಪ್ಪ ಹಾಗೂ ಸಿಹಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ, ಇಂದಿನಿಂದ ನಂದಿನಿ ಉತ್ಪನ್ನಗಳು ಅಮೆರಿಕಾದಲ್ಲೂ ಲಭ್ಯವಿರುವುದಾಗಿ ಘೋಷಿಸಿದರು. ವಿಶೇಷವಾಗಿ ನಂದಿನಿ ಪೇಡ, ಮೈಸೂರು ಪಾಕ್, ಬರ್ಫಿ ಹಾಗೂ ಸೇವರಿಸ್ ಉತ್ಪನ್ನಗಳಿಗೆ ಅಲ್ಲಿ ಹೆಚ್ಚು ಬೇಡಿಕೆಯಿದೆ.
ಇದೀಗ ಸೌದಿ ಅರೇಬಿಯಾದಿಂದ 8 ಮೆಟ್ರಿಕ್ ಟನ್, ಯುಎಸ್‌ಎನಿಂದ 5 ಮೆಟ್ರಿಕ್ ಟನ್ ಹಾಗೂ ಆಸ್ಟ್ರೇಲಿಯಾದಿಂದ 1 ಮೆಟ್ರಿಕ್ ಟನ್ ತುಪ್ಪಕ್ಕೆ ಬೇಡಿಕೆ ಬಂದಿದ್ದು, ಇಂದಿನಿಂದ ಈ ಮೂರು ದೇಶಗಳಿಗೆ ತುಪ್ಪ ಪೂರೈಕೆಗೆ ಅಧಿಕೃತ ಚಾಲನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



