ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಅಕ್ರಮದಿಂದ ರಾಜ್ಯಕ್ಕೆ 44 ಕೋಟಿ ರೂ ನಷ್ಟ; 'ಕೈ' ಶಾಸಕ ಸತೀಶ್ ಸೈಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
ಚಾರ್ಜ್‌ಶೀಟ್‌ನಲ್ಲಿ ಕಬ್ಬಿಣದ ಅದಿರು ಅಕ್ರಮ ರಫ್ತಿನಿಂದ ಸರ್ಕಾರದ ಖಜಾನೆಗೆ ಸುಮಾರು 44.09 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಬೆಂಗಳೂರು: ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಕದ್ದು ಸಾಗಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿಮಿಟೆಡ್ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಚಾರ್ಜ್‌ಶೀಟ್‌ನಲ್ಲಿ ಕಬ್ಬಿಣದ ಅದಿರು ಅಕ್ರಮ ರಫ್ತಿನಿಂದ ಸರ್ಕಾರದ ಖಜಾನೆಗೆ ಸುಮಾರು 44.09 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಸೈಲ್ ಅವರ ಕಂಪನಿಯು ಬಳ್ಳಾರಿಯ ಕೆಲ ಅದಿರು ಗಣಿಗಾರಿಕೆ ಕಂಪನಿಗಳಿಂದ ಈ ಕಬ್ಬಿಣದ ಅದಿರನ್ನು ಸಾಗಿಸಿದೆ. ಇದಕ್ಕಾಗಿ ಆ ಕಂಪನಿಗಳಿಗೆ ರೂ.46.18 ಕೋಟಿ ಪಾವತಿಸಲಾಗಿದೆ. ಸೈಲ್ ಅವರ ಕಂಪನಿಯು ಆ ಅದಿರನ್ನು ಚೀನಾಕ್ಕೆ ಸಾಗಿಸಿದೆ. ಅಲ್ಲಿ ಸೈಲ್ ಅವರ ಒಡೆತನದ ಕಂಪನಿಗಳೇ ಆ ಅದಿರನ್ನು ಖರೀದಿಸಿವೆ. ನಂತರ ಚೀನಾದ ಇತರ ಕಂಪನಿಗಳಿಗೆ ಮಾರಾಟ ಮಾಡಿವೆ.
ಸೈಲ್ ಅವರ ಚೀನಾದಲ್ಲಿ ಹೊಂದಿರುವ ಜಿಐ ಐರನ್ ಆ್ಯಂಡ್ ಸ್ಟೀಲ್ ಇನ್ವೆಸ್ಟ್‌ಮೆಂಟ್ ಕಂಪನಿ ಲಿಮಿಟೆಡ್ ಮೂಲಕವೇ ಈ ವಹಿವಾಟುಗಳು ನಡೆದಿವೆ. ಜೊತೆಗೆ ಸತೀಶ್ ಸೈಲ್ ಅವರು ಚೀನಾದ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ (ಹಾಂಗ್‌ಕಾಂಗ್ ಶಾಖೆ) ಲಿಮಿಟೆಡ್, ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಪ್ ಚೈನಾದಲ್ಲಿ ಖಾತೆಗಳನ್ನು ಹೊಂದಿದ್ದು, ವೈಯಕ್ತಿಕ ಹಾಗೂ ಕಂಪನಿಯ ಹಣಕಾಸು ವಹಿವಾಟುಗಳನ್ನು ಈ ಖಾತೆಗಳ ಮೂಲಕವೇ ನಡೆಸಿದ್ದಾರೆಂದು ವಿವರಿಸಿದೆ.
ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್, ಆಶಾಪುರ ಮಿನಿಕೆಮ್ ಲಿಮಿಟೆಡ್, ಐಎಲ್‌ಸಿ ಇಂಡಸ್ಟ್ರೀಸ್ ಲಿಮಿಟೆಡ್, ಸ್ವಸ್ತಿಕ್ ಸ್ಟೀಲ್ಸ್ (ಹೊಸಪೇಟೆ) ಲಿಮಿಟೆಡ್, ಲಾಲ್ ಮಹಲ್ ಲಿಮಿಟೆಡ್ ಮತ್ತು ಪಿಜೆಎಸ್ ಓವರ್‌ಸೀಸ್ ಲಿಮಿಟೆಡ್ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿಮಿಟೆಡ್ ಜತೆಗೆ ಅಕ್ರಮ ವಹಿವಾಟು ನಡೆಸಿವೆ ಎಂದೂ ದೂರಿನಲ್ಲಿ ಉಲ್ಲೇಖಿಸಿದೆ.
ಸುಮಾರು ರೂ.44 ಕೋಟಿ ಮೌಲ್ಯದ ಕಬ್ಬಿಣದ ಅದಿರು ಅಕ್ರಮ ರಫ್ತು ಸಂಬಂಧ 2010ರಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಆ ಬಳಿಕ ಇ.ಡಿ. ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಬಳ್ಳಾರಿಯಿಂದ ಬೇಲೆಕೇರಿ ಬಂದರಿಗೆ ಸುಮಾರು 8 ಲಕ್ಷ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ನಲ್ಲಿ ಇ.ಡಿ.ಅಧಿಕಾರಿಗಳು ಸತೀಶ್ ಸೈಲ್ ಅವರನ್ನು ಬಂಧಿಸಿದ್ದರು.
ಇದೀಗ ಸತೀಶ್ ಸೈಲ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕರಾಗಿದ್ದು, ಈ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ ಕಂಪನಿಗೆ 27 ಕೋಟಿ ರೂಪಾಯಿ ಲಾಭವಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



