ಗೆಳತಿಯೊಂದಿಗೆ ಅಕ್ರಮ ಸಂಬಂಧ: ಗಾಢ ನಿದ್ರೆಯಲ್ಲಿದ್ದವನ ಸಜೀವ ದಹನ, ಆರೋಪಿ ಬಂಧನ
ಮೃತ ಇಜುಲ್ ಹಕ್ ಹಾಗೂ ಆರೋಪಿ ಅಲಿ ಇಬ್ಬರೂ ಅಸ್ಸಾಂ ಮೂಲದವರಾಗಿದ್ದಾರೆ. ಮೃತ ವ್ಯಕ್ತಿ ವಿವಾಹಿತನಾಗಿದ್ದು, 6 ತಿಂಗಳ ಹೆಣ್ಣು ಮಗುವಿದೆ. ಪತ್ನಿ ಹಾಗೂ ಮಗು ಅಸ್ಸಾಂನಲ್ಲೇ ವಾಸವಿದ್ದು, ಒಂದು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ.

ಬೆಂಗಳೂರು: ತನ್ನ ಗೆಳತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಅನುಮಾನಗೊಂಡು ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಸಜೀವ ದಹಿಸಿರುವ ಘಟನೆಯೊಂದು ಕಡುಬೀಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿ ಶುಕ್ರವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಇಜುಲ್ ಹಕ್ (25) ಎಂದು ಗುರ್ತಿಸಲಾಗಿದೆ. ಪ್ರಕರಣ ಸಂಬಂಧ ಡೆಲಿವರಿ ಏಜೆಂಟ್ ಆಗಿದ್ದ ಮುನಾವರ್ ಅಲಿ (22) ಎಂಬಾತನನ್ನು ಪೊಲೀಸರು ಬಂದನಕ್ಕೊಳಪಡಿಸಿದ್ದಾರೆ.
ಮೃತ ಇಜುಲ್ ಹಕ್ ಹಾಗೂ ಆರೋಪಿ ಅಲಿ ಇಬ್ಬರೂ ಅಸ್ಸಾಂ ಮೂಲದವರಾಗಿದ್ದಾರೆ. ಮೃತ ವ್ಯಕ್ತಿ ವಿವಾಹಿತನಾಗಿದ್ದು, 6 ತಿಂಗಳ ಹೆಣ್ಣು ಮಗುವಿದೆ. ಪತ್ನಿ ಹಾಗೂ ಮಗು ಅಸ್ಸಾಂನಲ್ಲೇ ವಾಸವಿದ್ದು, ಒಂದು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ. ಸಲಾವುದ್ದೀನ್ ಎಂಬುವವರ ಶೆಡ್ ನಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.
ಇನ್ನು ಆರೋಪಿ ಅಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯೊಂದಿಗೆ ಹಕ್ ಅಕ್ರಮ ಸಂಬಂಧ ಹೊಂದಿದ್ದಾನೆಂದು ಅನುಮಾನಿಸಿದ್ದಾನೆ. ಇದರಂತೆ ಕಳೆದ ಬುಧವಾರ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಈ ವೇಳೆ ಹಕ್ ಅವರ ಇಬ್ಬರು ಸ್ನೇಹಿತರಾದ ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಬೆಂಬಲಕ್ಕೆ ಬಂದಿದ್ದು, ಈ ವೇಳೆ ಆರೋಪಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ, ಹೋಗಿದ್ದಾನೆ.
ಈ ನಡುವೆ ಶುಕ್ರವಾರ ಬೆಳಗಿನ ಜಾವ 3.30 ರಿಂದ 4.30 ರ ಸುಮಾರಿಗೆ ಶೆಡ್ ಬಳಿ ಬಂದಿರುವ ಆರೋಪಿ, ಗಾಢನಿದ್ರೆಗೆ ಜಾರಿದ್ದ ಇಜುಲ್ ಹಕ್, ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಘಟನೆ ವೇಳೆ ಹಕ್ ಅವರ ಸೋದರ ಮಾವ ರಶೀದುಲ್ ಹಕ್ ಶೆಡ್ ನಿಂದ ದೂರದಲ್ಲಿ ಮಲಗಿದ್ದು, ಮೂವರ ಕೂಗಾಟ ಕೇಳಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಇಜುಲ್ ಹಕ್ ಸಾವನ್ನಪ್ಪಿದ್ದು, ಮತ್ತಿಬ್ಬರು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್‌ನಲ್ಲಿ ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಗಾಯಗೊಂಡಿರುವ ಇಬ್ಬರ ಪೈಕಿ ಶಹನೂರ್ ಆನ್‌ಲೈನ್ ಡೆಲಿವರಿ ಬಾಯ್ ಆಗಿದ್ದು, ನಾಲ್ಕು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ. ಇನ್ನು ಫರಿದುಲ್ ಕಳೆದ ಒಂದು ವರ್ಷದಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಮಾರತಹಳ್ಳಿ ಪೊಲೀಸರು ಆರೋಪಿ ವಿರುದ್ಧ ಕೊಲೆ (ಬಿಎನ್‌ಎಸ್ 103) ಮತ್ತು ಕೊಲೆಯತ್ನ (ಬಿಎನ್‌ಎಸ್ 109) ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



