ರಾಜ್ಯದ ಮುಂದಿನ ಡಿಜಿ-ಐಜಿಪಿ ಯಾರು? ಪ್ರಶಾಂತ್ ಠಾಕೂರ್, ಎಂ.ಎ ಸಲೀಂ ರೇಸ್‌ನಲ್ಲಿ!
ರಾಜ್ಯ ಸರ್ಕಾರವು ಮುಂದಿನ ಡಿಜಿ - ಐಜಿಪಿ ಆಯ್ಕೆ ಮಾಡಲು ಡಿಜಿಪಿ ಶ್ರೇಣಿಯ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ರಾಜ್ಯದ ಹಾಲಿ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಅಲೋಕ್ ಮೋಹನ್ ಅವರು ಸೇವಾವಧಿಯನ್ನು ಮೇ 21ರ ವರೆಗೆ ವಿಸ್ತರಿಸಲಾಗಿದ್ದು, ಮುಂದಿನ ಪೊಲೀಸ್ ಮುಖ್ಯಸ್ಥರ ಬಗ್ಗೆ ಅಧಿಕಾರಶಾಹಿಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಹೆಸರು ಹೇಳಲು ಇಚ್ಛಿಸದ ಮೂಲಗಳ ಪ್ರಕಾರ, ಮುಖ್ಯ ಕಾರ್ಯದರ್ಶಿ ಕಚೇರಿಯು ಮೇ 21 ರಂದು ಅಲೋಕ್ ಮೋಹನ್ ಅವರ ನಿವೃತ್ತಿ ಪ್ರಯೋಜನಗಳನ್ನು ಪಡೆಯಲು ಅವರ ಎರಡು ವರ್ಷಗಳ ಅವಧಿಯನ್ನು 'ಪೂರ್ಣಗೊಳಿಸಲಾಗಿದೆ' ಎಂದು ತಿಳಿಸಿ ಅಕೌಂಟೆಂಟ್ ಜನರಲ್‌ಗೆ ಪತ್ರ ಬರೆದಿದೆ. ಆದಾಗ್ಯೂ, ಅವರ ಅಧಿಕಾರಾವಧಿಯ ಕುರಿತು ಸರ್ಕಾರ ಇಲ್ಲಿಯವರೆಗೆ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಇದು ರಾಜ್ಯದ ಅಧಿಕಾರಶಾಹಿಯಲ್ಲಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದೆ.
ಅಲೋಕ್ ಮೋಹನ್ ಅವರು ಏಪ್ರಿಲ್ 30ಕ್ಕೆ ಸೇವೆಯಿಂದ ನಿವೃತ್ತಿಯಾಗಬೇಕಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹಂಗಾಮಿ ಅವಧಿಯನ್ನು ಬಿಟ್ಟು ಎರಡು ವರ್ಷ ಪೂರ್ಣವಾಗುವ ತನಕ ಸೇವಾ ಅವಧಿ ವಿಸ್ತರಿಸುವಂತೆ ಅಲೋಕ್ ಮೋಹನ್ ಮನವಿ ಸಲ್ಲಿಸಿದ್ದರು. ಹೀಗಾಗಿ, ಮೇ 21ಕ್ಕೆ ಅಲೋಕ್ ಮೋಹನ್ ಅವರ ಸೇವಾವಧಿ 2 ವರ್ಷ ಪೂರ್ಣವಾಗಲಿದೆ.
ಇನ್ನು ಅಲೋಕ್ ಮೋಹನ್ ಅವರ ಉತ್ತರಾಧಿಕಾರಿಯ ವಿಷಯಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರವಾಗಿ, ರಾಜ್ಯ ಸರ್ಕಾರವು ಮುಂದಿನ ಡಿಜಿ - ಐಜಿಪಿ ಆಯ್ಕೆ ಮಾಡಲು ಡಿಜಿಪಿ ಶ್ರೇಣಿಯ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.
ಪಟ್ಟಿಯಲ್ಲಿ ಸೇವಾ ಹಿರಿತನ ಆಧಾರದಲ್ಲಿ ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ, ಡಿಜಿಪಿಗಳಾದ ಕೆ. ರಾಮಚಂದ್ರರಾವ್, ಪ್ರಣಬ್ ಮೊಹಾಂತಿ ಹೆಸರುಗಳಿವೆ ಎಂದು ತಿಳಿದು ಬಂದಿದೆ.
ಮುಂದಿನ ಪೊಲೀಸ್ ಮುಖ್ಯಸ್ಥರ ನೇಮಕಕ್ಕೆ ಕೇವಲ ಹದಿನೈದು ದಿನಗಳು ಬಾಕಿ ಇರುವಾಗ, ರಾಜ್ಯ ಪೊಲೀಸ್ ಮುಖ್ಯಸ್ಥರ ಹುದ್ದೆಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಠಾಕೂರ್ ಮತ್ತು ಸಲೀಮ್ ಅವರಲ್ಲಿ ಪೈಪೋಟಿ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



