ಮಳೆಗಾಲ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಿ: ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ
ನಗರದಲ್ಲಿ 209 ಪ್ರವಾಹ ಪೀಡಿತ ಪ್ರದೇಶಗಳಿವೆ. ಯಾವುದೇ ಅನಾನುಕೂಲತೆಯನ್ನು ತಡೆಗಟ್ಟಲು ಈಗಾಗಲೇ 166 ಸ್ಥಳಗಳಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಬೆಂಗಳೂರು: ಮಳೆಗಾಲದಲ್ಲಿ ನಗರದಲ್ಲಿ ಎದುರಾಗುವ ಪ್ರವಾಹ ಮತ್ತು ಮಳೆ ಸಂಬಂಧಿತ ವಿಪತ್ತುಗಳ ತಡೆಗಟ್ಟಲು ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.
ವಿಕಾಸ ಸೌಧದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು.
ನಗರದಲ್ಲಿ 209 ಪ್ರವಾಹ ಪೀಡಿತ ಪ್ರದೇಶಗಳಿವೆ. ಯಾವುದೇ ಅನಾನುಕೂಲತೆಯನ್ನು ತಡೆಗಟ್ಟಲು ಈಗಾಗಲೇ 166 ಸ್ಥಳಗಳಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉಳಿದ 43 ಪ್ರದೇಶಗಳಲ್ಲಿಯೂ ಅಗತ್ಯ ಕ್ರಮಗಳ ಕೈಗೊಳ್ಳಬೇಕು. ಪ್ರತಿ ವಲಯದ ಹಿರಿಯ ಅಧಿಕಾರಿಗಳು ಈ ಪ್ರವಾಹ ಪೀಡಿತ ಸ್ಥಳಗಳಲ್ಲಿ ವೈಯಕ್ತಿಕವಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸೂಚಿಸಿದರು.
ಮಾರ್ಚ್‌ನಲ್ಲಿ, ಸಂಚಾರ ಪೊಲೀಸರು ಬಿಬಿಎಂಪಿ ಮಿತಿಯೊಳಗಿನ ಪ್ರಮುಖ ರಸ್ತೆಗಳಲ್ಲಿ 82 ನೀರು ನಿಲ್ಲುವ ತಾಣಗಳನ್ನು ಗುರುತಿಸಿ, ಪಟ್ಟಿಯನ್ನು ಬಿಬಿಎಂಪಿಗೆ ಸಲ್ಲಿಸಿದ್ದಾರೆ. ಪಟ್ಟಿಯ ಪ್ರಕಾರ ಈ ಸ್ಥಳಗಳನ್ನು ಪರಿಶೀಲಿಸಿ, ಪಕ್ಕದ ಚರಂಡಿಗಳಲ್ಲಿ ಹೂಳೆತ್ತಿ ಸ್ವಚ್ಛಗೊಳಿಸಿ, ನೀರು ನಿಲ್ಲುವುದನ್ನು ತಡೆಗಟ್ಟಬೇಕು. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.
ನಗರದಲ್ಲಿ 20 ಅಗ್ನಿಶಾಮಕ ಠಾಣೆಗಳು ಮತ್ತು ಒಂದು SDRF ತಂಡವಿದೆ. ಅಗ್ನಿಶಾಮಕ ಠಾಣೆಗಳು ಮಳೆಗಾಲ ಮುಗಿಯುವವರೆಗೆ ಸಕ್ರಿಯವಾಗಿ ಕೆಲಸ ಮಾಡಬೇಕು. ಅಗ್ನಿಶಾಮಕ ಠಾಣೆಗಳೊಂದಿಗೆ ವಲಯ ಆಯುಕ್ತರು ಸದಾ ಸಂಪರ್ಕದಲ್ಲಿರಬೇಕು. ಜತೆಗೆ ಅಗ್ನಿಶಾಮಕ ಠಾಣೆಯಲ್ಲಿಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳ ದೂರವಾಣಿ ಸಂಖ್ಯೆಗಳ ವಿವರ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ವಲಯ ಮಟ್ಟದಲ್ಲಿ, ಬಿಬಿಎಂಪಿ ಕೇಂದ್ರ ಕಚೇರಿ ಮತ್ತು 63 ಉಪವಿಭಾಗಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುವುದು. ತ್ವರಿತ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿ, ಬೆಸ್ಕಾಂ ಮತ್ತು ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳನ್ನು ಈ ನಿಯಂತ್ರಣ ಕೊಠಡಿಗಳಿಗೆ ನಿಯೋಜಿಸಲಾಗುವುದು.ಮಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಾಟ್ಸಾಪ್ ಗುಂಪನ್ನು ರಚಿಸಬೇಕು. ಅದರ ಮುಖೇನ ಸಮನ್ವಯ ಸಾಧಿಸಿ ಮಳೆ ಹಾನಿ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು, 175 ಕಿ.ಮೀ. ಉದ್ದದ ರಾಜಕಾಲುವೆಗಳ ನಿರ್ವಹಣೆ ಸಮರ್ಪಕವಾಗಿ ನಡೆಯಬೇಕು. ಪ್ರಗತಿಯಲ್ಲಿರುವ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಸಭೆಯಲ್ಲಿ ಸಂಚಾರ ಪೊಲೀಸರು ನೀಡಿದ್ದ ಪಟ್ಟಿಯಂತೆ 647 ರಸ್ತೆ ಗುಂಡಿಗಳ ಪೈಕಿ 323 ಮುಚ್ಚಲಾಗಿದೆ. 239 ಗುಂಡಿಗಳಷ್ಟೇ ಮುಚ್ಚುವುದು ಬಾಕಿದೆ. 90 ರಸ್ತೆ ಗುಂಡಿಗಳು ಬೇರೆ ಬೇರೆ ಇಲಾಖೆ ವ್ಯಾಪ್ತಿಗೆ ಬರುತ್ತವೆ. 5 ಗುಂಡಿಗಳು ಪಾಲಿಕೆಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಮಾತನಾಡಿ,'ಮಳೆಯಿಂದ ಸಮಸ್ಯೆಯಾಗುವ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



