ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್; ಅಧಿಕಾರಿಗಳು, ಮುಸ್ಲಿಂ ಮುಖಂಡರೊಂದಿಗೆ ಸರಣಿ ಸಭೆ
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಸಚಿವ ಪರಮೇಶ್ವರ್ ಅವರು ವಿಮಾನ ನಿಲ್ದಾಣದಿಂದ ಸರ್ಕೀಟ್ ಹೌಸ್ ಗೆ ಆಗಮಿಸಿದ್ದು, ಸರ್ಕೀಟ್ ಹೌಸ್ ನಲ್ಲಿ ಮಾತುಕತೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.

ಮಂಗಳೂರು: ಕರಾವಳಿಯಲ್ಲಿ ನಡೆದ ಸರಣಿ ಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಶನಿವಾರ ಮಂಗಳೂರಿಗೆ ಭೇಟಿ ನೀಡಿದ್ದು, ಸ್ಥಳೀಯ ಅಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಸಚಿವ ಪರಮೇಶ್ವರ್ ಅವರು ವಿಮಾನ ನಿಲ್ದಾಣದಿಂದ ಸರ್ಕೀಟ್ ಹೌಸ್ ಗೆ ಆಗಮಿಸಿದ್ದು, ಸರ್ಕೀಟ್ ಹೌಸ್ ನಲ್ಲಿ ಮಾತುಕತೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ಹಿಂದುತ್ವಪರ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳ ತಂಡವು ಬಜಪೆಯ ಕಿನ್ನಿಪದವಿನಲ್ಲಿ ತಲವಾರಿನಿಂದ ಕೊಚ್ಚಿ ಗುರುವಾರ ಬರ್ಬರವಾಗಿ ಹತ್ಯೆ ಮಾಡಿದ್ದರು.
ಬಜಪೆಯ ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ ಪ್ರಕರಣಗಳೂ ಸೇರಿದಂತೆ ಐದು ಪ್ರಕರಣಗಳು ದಾಖಲಾಗಿದ್ದವು. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾದ ಬೆನ್ನಲ್ಲೇ ಸುರತ್ಕಲ್‌ನಲ್ಲಿ 2022ರ ಜುಲೈ 28ರಂದು ನಡೆದಿದ್ದ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಕಳೆದ ವರ್ಷ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎಂದು ತಿಳಿದುಬಂದಿದೆ.
ಸುಹಾಸ್ ಶೆಟ್ಟಿ ಇನ್ನೊವಾ ಕಾರಿನಲ್ಲಿ ಸಹಚರರಾದ ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಹಾಗೂ ಶಶಾಂಕ್ ಜೊತೆ ತೆರಳುತ್ತಿದ್ದಾಗ ಐದಾರು ಮಂದಿ ದುಷ್ಕರ್ಮಿಗಳ ತಂಡ ಸ್ವಿಫ್ಟ್ ಕಾರು ಹಾಗೂ ಪಿಕಪ್ ವಾಹನದಲ್ಲಿ ಹಿಂಬಾಲಿಸಿತ್ತು.
ಬಜಪೆ ಠಾಣೆ ವ್ಯಾಪ್ತಿಯ ಕಿನ್ನಿಪದವಿನಲ್ಲಿ ರಾತ್ರಿ 8.27ಕ್ಕೆ ಕಾರನ್ನು ಏಕಾಏಕಿ ಅಡ್ಡಗಟ್ಟಿ ಸುಹಾಸ್ ಶೆಟ್ಟಿ ಮೇಲೆ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಎ.ಜೆ.ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಅಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದ ಎಂದು ವರದಿಗಳು ತಿಳಿಸಿವೆ. ಈ ಹತ್ಯೆ ಘಟನೆ ಬೆನ್ನಲ್ಲೇ ಕರಾವಳಿ ಸರಣಿ ಹತ್ಯೆ ಕುರಿತು ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



