ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಸಿಲ್ಲ, ಹೈಕೋರ್ಟ್ ಆದೇಶ ಪಾಲಿಸಲಾಗಿದೆ: ಕೆ.ಜೆ ಜಾರ್ಜ್ ಸ್ಪಷ್ಟನೆ
ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿ ಹಣದ ಪಾಲನ್ನು ಗ್ರಾಹಕರಿಂದ ಪಡೆಯಬಹುದು ಎಂಬ ಹೈಕೋರ್ಟ್ ಆದೇಶದ ಮೇರೆಗೆ ಕೆಇಆರ್‌ಸಿ ಈ ಆದೇಶ ಹೊರಡಿಸಿದೆ.

ಬೆಂಗಳೂರು: ವಿದ್ಯುತ್ ದರ ಏರಿಗೆ ನಿರ್ಧಾರ ರಾಜ್ಯ ಸರ್ಕಾರದ್ದಲ್ಲ, ಹೈಕೋರ್ಟ್ ತೀರ್ಪು ಪ್ರಕಾರ ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಆದೇಶ ನೀಡಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಅವರು ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ವಿದ್ಯುತ್ ದರ ಏರಿಕೆ ಕುರಿತು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದು, ಸಾರ್ವಜನಿಕರಿಂದಲೂ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಸರಕಾರ ವಿದ್ಯುತ್ ದರವನ್ನು ಏರಿಸಿಲ್ಲ. ಪ್ರತಿ ಯೂನಿಟ್‍ಗೆ 36 ಪೈಸೆ ಏರಿಕೆ ಆಗಿರುವುದು ವಿದ್ಯುತ್ ದರದ ಏರಿಕೆಯಲ್ಲ. ಬದಲಿಗೆ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿ ಹಣದ ಪಾಲನ್ನು ಗ್ರಾಹಕರಿಂದ ಪಡೆಯಬಹುದು ಎಂಬ ಹೈಕೋರ್ಟ್ ಆದೇಶದ ಮೇರೆಗೆ ಕೆಇಆರ್‌ಸಿ ಈ ಆದೇಶ ಹೊರಡಿಸಿದೆ. ಅದರಂತೆ, 2025-26ರ ಹಣಕಾಸು ವರ್ಷದಲ್ಲಿ ಪ್ರತಿ ಯೂನಿಟ್‍ಗೆ 36 ಪೈಸೆಯನ್ನು ಏರಿಸಿದೆ ಎಂದು ಹೇಳಿದರು.
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಬಿ)ಯನ್ನು ರದ್ದುಗೊಳಿಸಿ ಕೆಪಿಟಿಸಿಎಲ್ ಹಾಗೂ 5 ಎಸ್ಕಾಂಗಳನ್ನು ರಚಿಸಿದ ನಂತರ 2022ರ ಮಾರ್ಚ್‍ನಲ್ಲಿ ಕೆಇಆರ್‌ಸಿ ಮುಂದೆ ಪಿಂಚಣಿ ಮತ್ತು ಗ್ರಾಚ್ಯುಟಿ ಪಾಲನ್ನು ಗ್ರಾಹಕರಿಂದ ಪಡೆಯಲು ಆದೇಶಿಸುವಂತೆ ಅಂದಿನ ಬಿಜೆಪಿ ಸರಕಾರ ಮೊದಲ ಬಾರಿಗೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆಗ ಕೆಇಆರ್‌ಸಿ ಪ್ರಸ್ತಾವನೆಯನ್ನು ಪುರಸ್ಕರಿಸಿರಲಿಲ್ಲ. ಇದೀಗ ಹೈಕೋರ್ಟ್ ಆದೇಶದ ಮೇರೆಗೆ ಕೆಇಆರ್‌ಸಿ ಹೊಸ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಪಿಂಚಣಿ ಮತ್ತು ಗ್ರಾಚ್ಯುಟಿ ಪಾಲನ್ನು ಗ್ರಾಹರಕರಿಂದ ಪಡೆಯುವ ಪ್ರಸ್ತಾವನೆಯನ್ನು ಪ್ರಶ್ನಿಸಿ ಎಫ್‍ಕೆಸಿಸಿಐ ಹೈಕೋರ್ಟ್‍ಗೆ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ಹೈಕೋರ್ಟ್ 2024ರ ಮಾ.25ರಂದು ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು 2024ರ ನ.30ರಂದು ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಮತ್ತೆ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದವು. ಅದನ್ನು ಪುರಸ್ಕರಿಸಿ ಕೆಇಆರ್‌ಸಿಆದೇಶ ಹೊರಡಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ವಿದ್ಯುತ್ ಸುಧಾರಣಾ ನಿಯಮಗಳಿಗೆ 2022ರಲ್ಲಿ ತಿದ್ದುಪಡಿ ತರಲಾಗಿತ್ತು. ಕಪಿಟಿಸಿಎಲ್‍ಮತ್ತು ಎಸ್ಕಾಂಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಯ ಪಾಲನ್ನು ಗ್ರಾಹಕರಿಂದ ಪಡೆಯಲು ಕೆಇಆರ್‍ಸಿ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ತಿದ್ದುಪಡಿಯಲ್ಲಿ ಹೇಳಲಾಗಿತ್ತು. ಇದರ ಆಧಾರದ ಮೇಲೆ ಮತ್ತು ಹೈಕೋರ್ಟ್ ಆದೇಶದಂತೆ ಕೆಇಆರ್‌ಸಿ ದರ ಹೆಚ್ಚಳ ಮಾಡಿದೆ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



