ನಿಯಮ ಬಾಹಿರವಾಗಿ ಸಾಲ ವಸೂಲಾತಿಗೆ ಮುಂದಾದರೆ ಕಠಿಣ ಕ್ರಮ: ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಸಿಎಂ ಎಚ್ಚರಿಕೆ
ಸಾರ್ವಜನಿಕರ ಹಿತದೃಷ್ಟಿಯಿಂದ ಶೀಘ್ರವೇ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನನ್ನು ಜಾರಿಗೆ ತರುತ್ತೇವೆ.

ಬೆಂಗಳೂರು: ಮೈಕ್ರೋಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುವುದು ಮತ್ತು ನಿಜವಾದ ಸಾಲಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.
ಮೈಕ್ರೋ-ಫೈನಾನ್ಸ್ ಕಂಪನಿಗಳು ಸಾಲಗಾರರಿಂದ ಹಣ ವಸೂಲಿ ಮಾಡಲು ಕಿರುಕುಳ ನೀಡುತ್ತಿವೆ ಎಂದು ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗೃಹ ಸಚಿವ ಜಿ. ಪರಮೇಶ್ವರ, ಕಾನೂನು ಸಚಿವ ಎಚ್.ಕೆ. ಪಾಟೀಲ್, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
ಮೈಕ್ರೋಫೈನಾನ್ಸ್ ಕಂಪನಿಗಳ ಸಂಘದ ಪ್ರತಿನಿಧಿಗಳು, ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿಗಳು ಮತ್ತು ನಬಾರ್ಡ್ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.
ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಸಾಲ ವಸೂಲಾತಿ ವೇಳೆ ಆರ್‌ಬಿಐ ನಿಯಮದಂತೆ ನಡೆದುಕೊಳ್ಳಬೇಕು. ಸಂಜೆ 5 ಗಂಟೆ ನಂತರ ಸಾಲ ವಸೂಲಾತಿಗೆ ಹೋಗಬಾರದು. ಮೈಕ್ರೋ ಫೈನಾನ್ಸ್, ಗಿರವಿ ಅಂಗಡಿಯವರು ಈ ಕಾನೂನು ಪಾಲಿಸಬೇಕು. ಕಾನೂನು ಬಾಹಿರವಾಗಿ ಸಾಲ ವಸೂಲಾತಿಗೆ ಮುಂದಾದರೆ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
"ಸಾಲ ನೀಡಬೇಡಿ ಅಥವಾ ಸಾಲಗಾರರಿಂದ ಸಾಲ ವಸೂಲಿ ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ ಸಾಲ ವಸೂಲಿ ಮಾಡುವಾಗ ನೀವು ಜನರನ್ನು ಹಿಂಸಿಸಬಾರದು ಮತ್ತು ಕಿರುಕುಳ ನೀಡಬಾರದು" ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.
ಸಾಲ ವಸೂಲಿ ಮಾಡುವಾಗ, ಆರ್‌ಬಿಐ ಮಾರ್ಗಸೂಚಿಗಳನ್ನು ಮೈಕ್ರೋ-ಫೈನಾನ್ಸ್ ಕಂಪನಿಗಳು ಕಡ್ಡಾಯವಾಗಿ ಪಾಲಿಸಬೇಕು. ಕೇಂದ್ರ ಬ್ಯಾಂಕ್ ಸಹ ಈ ಮಾರ್ಗಸೂಚಿಗಳ ಉಲ್ಲಂಘನೆಯ ಮೇಲ್ವಿಚಾರಣೆ ಮಾಡಬೇಕು ಎಂದು ಸಿಎಂ ಹೇಳಿದರು.
"ನಾವು ಅಸ್ತಿತ್ವದಲ್ಲಿರುವ ಕಾನೂನನ್ನು ತಿದ್ದುಪಡಿ ಮಾಡುತ್ತೇವೆ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿಸಲು ಹಾಗೂ ಸಾಲಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಹೊಸ ಮಸೂದೆ ಮಂಡಿಸುತ್ತೇವೆ" ಎಂದು ಸಿದ್ದರಾಮಯ್ಯ ತಿಳಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಶೀಘ್ರವೇ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನನ್ನು ಜಾರಿಗೆ ತರುತ್ತೇವೆ. ಒಂದು ವೇಳೆ ಸಾಲಗಾರರಿಗೆ ಕಿರುಕುಳ ನೀಡಿದರೆ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಆರ್ ಬಿಐ ನಿಯಮಗಳಿಗಿಂತ ಹೆಚ್ಚಿನ ಬಡ್ಡಿಯನ್ನು ವಿಧಿಸಬಾರದು ಎಂದು ಮುಖ್ಯಮಂತ್ರಿಗಳು ಕಂಪನಿಗಳಿಗೆ ಸೂಚಿಸಿದರು.
ಸಾಲ ವಸೂಲಾತಿಗೆ ರೌಡಿಶೀಟರ್ಗಳು, ಗೂಂಡಾಗಳನ್ನು ಬಳಸಲೇಬಾರದು. ಸಾಲ ವಸೂಲಾತಿ ಜವಾಬ್ದಾರಿಯನ್ನು ಫೈನಾನ್ಸ್ ಕಂಪನಿಗಳು ಔಟ್ಸೋರ್ಸ್ ಕೊಡಬಾರದು. ಹಾಗೆ ಮಾಡಿದ್ದೇ ಆದರೆ ಅಂಥವರ ವಿರುದ್ಧ ಕೇಸು ದಾಖಲಿಸಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆಂದು ಸಿಎಂ ಸಿದ್ದರಾಮಯ್ಯ ಖಡಕ್ ಸಂದೇಶ ರವಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



