ಕಪಿಲೇಶ್ವರ ದೇಗುಲದಲ್ಲಿ ಡಿಕೆಶಿ ವಿಶೇಷ ಪೂಜೆ: ಬೆಳಗಾವಿಯಲ್ಲೇ ಇದ್ದರೂ ನಾಯಕನ ಭೇಟಿಯಾಗದ ಜಾರಕಿಹೊಳಿ
ಕಾಮಗಾರಿಗಳ ಉದ್ಘಾಟನೆ ನೆಪ ಹೇಳಿಕೊಂಡು ಸತೀಶ್ ಅವರು ಡಿ.ಕೆ ಶಿವಕುಮಾರ್ ಅವರ ಭೇಟಿಯನ್ನು ನಿಯಂತ್ರಿಸುತ್ತಿದ್ದು, ಈ ಮೂಲಕ ಮುನಿಸು ಹೊರಹಾಕುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಳಗಾಳಿಯಲ್ಲೇ ವಾಸ್ತವ್ಯ ಹೂಡಿದ್ದರೂ ಸಚಿವ ಸತೀಶ್ ಜಾರಕಿಹೊಳಿಯವರು ಭೇಟಿ ಮಾಡದಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ಕಾಮಗಾರಿಗಳ ಉದ್ಘಾಟನೆ ನೆಪ ಹೇಳಿಕೊಂಡು ಸತೀಶ್ ಅವರು ಡಿ.ಕೆ ಶಿವಕುಮಾರ್ ಅವರ ಭೇಟಿಯನ್ನು ನಿಯಂತ್ರಿಸುತ್ತಿದ್ದು, ಈ ಮೂಲಕ ಮುನಿಸು ಹೊರಹಾಕುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಈ ನಡುವೆ ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಕಾಣಿಸಿಕೊಂಡ ಶಾಸಕರು ದುಬೈ ಪ್ರವಾಸಕ್ಕೆ ಯೋಜನೆ ರೂಪಿಸಿದ್ದು, 4-5 ದಿನಗಳ ಕಾಲ ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಡಿಕೆ ಶಿವಕುಮಾರ್ ಅವರು, ಭಾನುವಾರ ಸತೀಶ್ ಆಪ್ತ ಆಸೀಫ್ ಸೇಠ್ ನಿವಾಸಕ್ಕೆ ಭೇಟಿ ಕೊಟ್ಟಿದ್ದು, ಯಾರೆಲ್ಲಾ ಪ್ರವಾಸಕ್ಕೆ ಹೋಗುತ್ತಿದ್ದಾರೆಂಬುದರ ಕುರಿತು ಪ್ರಶ್ನೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸೇಠ್, ಯೋಜನೆ ರೂಪಿಸಲಾಗಿದೆ. ನಿಮಗೆ ಹೇಳದೇ ಹೋಗಲ್ಲ ಎಂದು ಉತ್ತರಿಸಿದ್ದಾರೆ. ಬಳಿಕ ಡಿಕೆ ಶಿವಕುಮಾರ್ ಅವರು, ಪಕ್ಷದಲ್ಲಿದ್ದಾಗ ಶಿಸ್ತಿನಿಂದ ಇರುವಂತೆ ಪಾಠ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಇನ್ನು ಬೆಳಗಾವಿಗೆ ಭೇಟಿ ನೀಡಿರುವ ಡಿಕೆ.ಶಿವಕುಮಾರ್, ಭಾನುವಾರ ತಾವು ವಾಸ್ತವ್ಯ ಹೂಡಿದ್ದ ಸರ್ಕಾರಿ ಪ್ರವಾಸಿ ಮಂದಿರದಿಂದ ನೇರವಾಗಿ ಶಹಾಪುರದ ಕಪಿಲೇಶ್ವರ ದೇವಸ್ಥಾನಕ್ಕೆ ತೆರಳಿ, ವಿವಿಧ ಧಾರ್ಮಿಕ ವಿಧಿವಿಧಾನ ಕೈಗೊಂಡರು. 101 ಲೀಟರ್ ಹಾಲು ಬಳಸಿ, ಶಿವಲಿಂಗಕ್ಕೆ ಅಭಿಷೇಕ ಮಾಡಿದರು.
ಬಳಿಕ ಮಾತನಾಡಿದ ಅವರು, ನಾನೊಬ್ಬ ದೈವ ಭಕ್ತ. ಪೂಜೆ ಮಾಡಿ, ದೈವಶಕ್ತಿ ನೆನಪಿಸಿಕೊಂಡೇ ಮನೆಯಿಂದ ಹೊರ ಬರುತ್ತೇನೆ. ಹಾಗಾಗಿ ದೇವಸ್ಥಾನಕ್ಕೆ ಬಂದಿದ್ದೇನೆ. ನಿಮ್ಮಿಂದ ರಕ್ಷಣೆ ಬೇಕಪ್ಪ' ಎಂದು ಹೇಳುವ ಮೂಲಕ, ಪರೋಕ್ಷವಾಗಿ ಬೆಳಗಾವಿ ನಾಯಕರಿಂದ ರಕ್ಷಣೆ ಬೇಕು ಎಂದು ಹೇಳಿದರು.
ಮಹಾ ಕುಂಭಮೇಳ ಕುರಿತು ಮಾತನಾಡಿ, ನಾನು ಕೂಡ ಈ ಬಾರಿ ಕುಂಭಮೇಳಕ್ಕೆ ಹೋಗುತ್ತಿದ್ದೇನೆ. ಉತ್ತರಪ್ರದೇಶ ಸರ್ಕಾರದ ಹಿರಿಯ ಸಚಿವರು ನನಗೆ ಆಹ್ವಾನಿಸಿದ್ದಾರೆ. ಯಾವುದೇ ಧರ್ಮದವರು ಆಗಲಿ, ಎಲ್ಲರಿಗೂ ಒಂದೊಂದು ನಂಬಿಕೆ ಇರುತ್ತದೆ. ನಾನು ನನ್ನ ಕುಟುಂಬದೊಂದಿಗೆ ಕುಂಭಮೇಳಕ್ಕೆ ಭೇಟಿ ನೀಡಲಿದ್ದೇನೆ. ಆದರೆ, ಭೇಟಿಯ ನಿಖರವಾದ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



