ಮಗು ಹುಟ್ಟಿದ ಮಾರನೇ ದಿನವೇ ತಂದೆ ದುರಂತ ಅಂತ್ಯ: ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದ ವ್ಯಕ್ತಿ ಸಾವು..!
ಶಿವಗೋಪಾಲಯ್ಯ (35) ಮೃತ ದುರ್ದೈವಿ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ನಿವಾಸಿ ಶಿವಗೋಪಾಲಯ್ಯ ಹೆರಿಗೆಗಾಗಿ ಪತ್ನಿಯನ್ನು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು.

ಮೈಸೂರು: ಹೆರಿಗೆಗಾಗಿ ಪತ್ನಿಯನ್ನು ಆಸ್ಪತ್ರೆಗೆ ಕರೆತಂದಿದ್ದ ಪತಿಯೊಬ್ಬ, ಮಗು ಹುಟ್ಟಿದ ಮರುದಿನವೇ ಮೃತಪಟ್ಟಿರುವ ದಾರುಣ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಶಿವಗೋಪಾಲಯ್ಯ (35) ಮೃತ ದುರ್ದೈವಿ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ನಿವಾಸಿ ಶಿವಗೋಪಾಲಯ್ಯ ಹೆರಿಗೆಗಾಗಿ ಪತ್ನಿಯನ್ನು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಹೀಗಾಗಿ, ನಾಗೇಶ್ ಪತ್ನಿಯ ಆರೈಕೆಗಾಗಿ ಕಳೆದ 5-6 ದಿನಗಳಿಂದ ಆಸ್ಪತ್ರೆಯಲ್ಲೇ ತಂಗಿದ್ದರು. ಪ್ರತಿದಿನ ಆಸ್ಪತ್ರೆಯ ಆವರಣದಲ್ಲಿ ಮಲಗುತ್ತಿದ್ದರು.
ಭಾನುವಾರ ಶಿವಗೋಪಾಲಯ್ಯ ಅವರ ಪತ್ನಿಗೆ ಹೆರಿಗೆಯಾಗಿದೆ. ಪತ್ನಿ ಅಶ್ವಥಮ್ಮ ಅವರು ಸಿಸೇರಿಯನ್ ಮೂಲಕ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಕುಟುಂಬದಲ್ಲಿ ಸಂತೋಷ ಮನೆ ಮಾಡಿತ್ತು. ತಂದೆಯಾದ ಖುಷಿಯಲ್ಲಿ ಶಿವಗೋಪಾಲಯ್ಯ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದು, ಬೆಳಗ್ಗೆ 7 ಗಂಟೆ ಸುಮಾರಿಗೆ ನೋಡಿದಾಗ ಮೃತಪಟ್ಟಿರುವುದು ತಿಳಿದಿದೆ. ಮಗು ಜನಿಸಿದ ಮರುದಿನವೇ ತಂದೆ ಉಸಿರು ಚಲ್ಲಿದ್ದಾರೆ. ತಂದೆಯಾದ ಖುಷಿಯಲ್ಲಿಯೇ ಶಿವಗೋಪಾಲಯ್ಯ ಬಾರದ ಲೋಕಕ್ಕೆ ತೆರಳಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮಾಡುವವರು ಮತ್ತು ಪರಿಚಾರಕರಿಗೆ ಮೀಸಲಾದ ವಸತಿ ನಿಲಯದ ಸೌಲಭ್ಯವಿದೆ. ಆದರೆ, ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರ ಉಚಿತವಾಗಿ ತಂಗಲು ಅವಕಾಶ ನೀಡಲಾಗಿದೆ. ಕಾರ್ಡ್ ಇಲ್ಲವರು ರೂ.30 ಕಟ್ಟಬೇಕಾಗುತ್ತದೆ. ಆದರೆ, ಈ ಹಣವನ್ನು ಶಿವಗೋಪಾಲಯ್ಯ ಅವರಿಗೆ ಭರಿಸಲು ಸಾಧ್ಯವಾಗಿಲ್ಲ. ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿರುವುದರಿಂದ ಯಾವುದೇ ಕ್ಷಣದಲ್ಲಿ ತಮ್ಮನ್ನು ಕೂಗಬಹುದು ಎಂದು ತಿಳಿದು ಆಸ್ಪತ್ರೆಯ ಆವರಣದಲ್ಲೇ ಮಲಗುತ್ತಿದ್ದರು ಎಂದು ತಿಳಿದುಬಂದಿದೆ.
ಈ ಮೂರು ದಿನಗಳಲ್ಲಿ ಆಸ್ಪತ್ರೆಯ ಅಟೆಂಡರ್ ಸುರೇಶ್ ಅವರೊಂದಿಗೆ ಶಿವಗೋಪಾಲಯ್ಯ ಅವರು ಸ್ನೇಹ ಬೆಳೆಸಿಕೊಂಡಿದ್ದರು. ಶಿವಗೋಪಾಲಯ್ಯ ಬಳಿ ಹಣವಿರಲಿಲ್ಲ. ಊಟಕ್ಕೂ ಹಣವಿರಲಿಲ್ಲ. ಅವರಿಗೆ ನಾವೇ ಸಹಾಯ ಮಾಡಿದ್ದೆವು. ವೈದ್ಯರೊಬ್ಬರು ಹಾಲಿನ ಪುಡಿ ಖರೀದಿಗೆ ಹಣ ನೀಡಿದ್ದರು. ಮಗು ಹುಟ್ಟಿದ್ದಕ್ಕೆ ಬಹಳ ಸಂತೋಷದಲ್ಲಿದ್ದರು ಎಂದು ಸುರೇಶ್ ಅವರು ಹೇಳಿದ್ದಾರೆ.
ಪ್ರತಿದಿನ ಆಸ್ಪತ್ರೆಯ ಆವರಣದಲ್ಲಿ ನೆಲದ ಮೇಲೆ ಮಲಗುತ್ತಿದ್ದ, ಪತ್ನಿ ಹಾಗೂ ಮಗುವನ್ನು ಒಂದು ಕ್ಷಣವೂ ಬಿಟ್ಟಿರುತ್ತಿರಲಿಲ್ಲ ಎಂದು ಭಾವುಕರಾಗಿದ್ದಾರೆ.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ ಅವರು ಮಾತನಾಡಿ, ವಸತಿ ನಿಲಯದ ಸೌಲಭ್ಯಗಳು ಲಭ್ಯವಿದ್ದರೂ ಶಿವಗೋಪಾಲಯ್ಯ ಅವರು ಅದನ್ನು ಬಳಸದಿರಲು ನಿರ್ಧರಿಸಿದ್ದರು. ಈ ದುರಂತದ ಬಗ್ಗೆ ನಮಗೆ ಇಂದು ಬೆಳಿಗ್ಗೆ ಮಾಹಿತಿ ಸಿಕ್ಕಿತು. ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ, ವರದಿಗಳು ಬಂದ ನಂತರ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಹೇಳಿದ್ದಾರೆ.
ಇನ್ನೂ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ ಅಶ್ವಥಮ್ಮ ಅವರಿಗೆ ಪತಿಯ ಸಾವಿನ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಮಗುವಿನ ಆಗಮನದಿಂದ ಸಂಭ್ರಮದಲ್ಲಿರಬೇಕಿದ್ದ ಕುಟುಂಬವೂ ಅತೀವ್ರ ದುಃಖದಲ್ಲಿ ಮುಳುಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



