News Headlines 11-01-25 | ನಕ್ಸಲರು ಬಳಸ್ತಿದ್ದ AK56 ಸೇರಿ 176 ಮದ್ದುಗುಂಡು ವಶ; ರಾಜಕೀಯ ಲಾಭಕ್ಕಾಗಿ ನಕ್ಸಲರ ಶರಣು- ಅಣ್ಣಾಮಲೈ; CT Raviಗೆ ಕೊಲೆ ಬೆದರಿಕೆ ಪತ್ರ!

1. ನಕ್ಸಲರು ಬಳಸುತ್ತಿದ್ದ AK56 ಸೇರಿ 176 ಮದ್ದುಗುಂಡು ವಶ
ನಕ್ಸಲಿಸಂ ತೊರೆದು ಮುಖ್ಯವಾಹಿನಿಗೆ ಬಂದಿದ್ದ ಆರು ನಕ್ಸಲರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ಎರಡು ದಿನಗಳ ನಿರಂತರ ಹುಡುಕಾಟದ ನಂತರ ಕೊಪ್ಪ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ. ಕೊಪ್ಪದ ಮೇಗೂರು ಅರಣ್ಯ ಪ್ರದೇಶದಲ್ಲಿ ಆರು ಬಂದೂಕು ಹಾಗೂ ಮದ್ದುಗುಂಡುಗಳನ್ನು ತಂಡ ವಶಪಡಿಸಿಕೊಂಡಿದೆ. ಒಂದು AK56,ಮೂರು 303 ರೈಫಲ್, 12 ಬೋರ್ SBBL,ಒಂದು ಸ್ವದೇಶ ನಿರ್ಮಿತ ಬಂದೂಕು ಸಿಕ್ಕಿದೆ. ಇನ್ನು 7.62 MM AK ಮದ್ದುಗುಂಡು-11, 303 ರೈಫಲ್ ಮದ್ದುಗುಂಡು 133, 12 ಬೋರ್ ಕಾರ್ಟ್ರಿಡ್ಜಸ್, ಸ್ವದೇಶ ನಿರ್ಮಿತ ಪಿಸ್ತೂಲ್ ಮದ್ದುಗುಂಡುಗಳು 8 ಸೇರಿ ಒಟ್ಟು 176 ಮದ್ದುಗುಂಡು ಸಿಕ್ಕಿದೆ. ಈಮಧ್ಯೆ, ನಕ್ಸಲರ ಶರಣಾಗತಿ ಕುರಿತಂತೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲ್ಲೈ, ನಕ್ಸಲ್ ಶರಣಾಗತಿ ಪ್ರಕ್ರಿಯೆಯ ಬಗ್ಗೆ, ವಿಶೇಷವಾಗಿ ವಿಕ್ರಮ್ ಗೌಡ ಎನ್‌ಕೌಂಟರ್ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ರಾಜಕೀಯ ಲಾಭಕ್ಕೋಸ್ಕರ ಶರಣಾಗತಿ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಸಿದ್ದಾರೆ.
2. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ; CT Raviಗೆ ಕೊಲೆ ಬೆದರಿಕೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪಕ್ಕೆ ಒಳಗಾಗಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರ ಕ್ಷಮೆ ಕೇಳದಿದ್ದರೆ ಕೊಲೆ ಮಾಡುವುದಾ ಸಿ.ಟಿ ರವಿಗೆ ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ. ಚಿಕ್ಕಮಗಳೂರಿನ ಸಿ.ಟಿ. ರವಿ ಅವರ ನಿವಾಸಕ್ಕೆ ಈ ಅನಾಮಧೇಯ ಪತ್ರ ಬಂದಿದ್ದು. ನಿಮ್ಮನ್ನು ಮತ್ತು ನಿಮ್ಮ ಪುತ್ರ ಸೂರ್ಯನನ್ನು ಹತ್ಯೆ ಮಾಡಲಾಗುತ್ತದೆ. ಕೂಡಲೇ ನೀವು ಬೆಳಗಾವಿಗೆ ಬಂದು ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳಬೇಕು. ಇನ್ನು 15 ದಿನದಲ್ಲಿ ನೀವು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ಕೈಕಾಲು ಮುರಿದು ಸಾಯಿಸುತ್ತೇವೆ, ನಿಮ್ಮ ಮಗನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
3. ಅಪಹರಣಕಾರರಿಗೆ ಗುಂಡೇಟು; ಇಬ್ಬರು ದುಷ್ಕರ್ಮಿಗಳ ಬಂಧನ
ಅಪಹರಣಕಾರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಪೊಲೀಸರು ಅವರ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ಇಂದು ಬೆಳಗ್ಗೆ ಯಲ್ಲಾಪುರ-ಹಳಿಯಾಳ ರಸ್ತೆಯಲ್ಲಿ ನಡೆದಿದೆ. ಮುಂಡಗೋಡ ಮೂಲದ ಉದ್ಯಮಿಯೊಬ್ಬರ ಅಪಹರಣದಲ್ಲಿ ಭಾಗಿಯಾಗಿದ್ದ ಐದು ದುಷ್ಕರ್ಮಿಗಳ ತಂಡವನ್ನು ಮುಂಡಗೋಡ ಪೊಲೀಸರು ಬೆನ್ನಟ್ಟಿದ್ದರು. ಘಟನೆಯಲ್ಲಿ ಮುಂಡಗೋಡ ಸಿಪಿಐ ರಂಗನಾಥ್ ಮತ್ತು ಪಿಎಸ್ಐ ಪರಶುರಾಮ್ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದು, ಇಬ್ಬರು ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಲಾಗಿದ್ದು ಅವರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ.
4. ಕಾರವಾರ: ರಾಸಾಯನಿಕ ಸೋರಿಕೆಯಾಗಿ 18 ಕಾರ್ಮಿಕರು ಅಸ್ವಸ್ಥ
ಕಾರವಾರದ ಬಿಣಗಾ ಬಳಿಯ ಆದಿತ್ಯ ಬಿರ್ಲಾ ಗ್ರೂಪ್ನ ಕಾಸ್ಟಿಕ್ ಸೋಡಾ ಉತ್ಪಾದಿಸುವ ಗ್ರಾಸಿಮ್ ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆಯಾಗಿ 18 ಕಾರ್ಮಿಕರು ಅಸ್ವಸ್ಥಗೊಂಡಿರುವಂತಹ ಘಟನೆ ನಡೆದಿದೆ. ಕರ್ನಾಟಕ, ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ 18 ಕಾರ್ಮಿಕರು ಅಸ್ವಸ್ಥಗೊಂಡಿದ್ದು ಸದ್ಯ ಗಾಯಾಳುಗಳಿಗೆ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅನಾಹುತ ಸಂಭವಿಸಿದರೂ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳದೇ 2 ಗಂಟೆಗಳ ಕಾಲ ಕಾರ್ಮಿಕರಿಂದ ದುಡಿಸಿಕೊಂಡಿದೆ. ಹೀಗಾಗಿ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಇನ್ನು ಘಟನೆ ಕುರಿತಂತೆ ಕಂಪನಿಯ ಬೇಜವಾಬ್ದಾರಿ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
5. ಸೇವಾ ವಿಸ್ತರಣೆಗಳು ನಿಯಮಾವಳಿಯನುಸಾರ ಸಾಲಿನಲ್ಲಿರುವವರಿಗೆ ಹಿನ್ನಡೆ
ಸೇವಾ ವಿಸ್ತರಣೆಗಳು ಅಥವಾ ನಿರ್ದಿಷ್ಟ ಹುದ್ದೆಗೆ ಯಾವುದೇ ರೂಪದ ವಿಸ್ತರಣೆಗಳು ನಿಯಮಾವಳಿಯನುಸಾರ ಸಾಲಿನಲ್ಲಿರುವವರಿಗೆ ಹಿನ್ನಡೆಯಾಗುತ್ತವೆ ಎಂದು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಹೇಳಿದರು. ಬೆಂಗಳೂರಿನಲ್ಲಿಂದು ನಡೆದ ಎಲ್ಲ ರಾಜ್ಯಗಳ ಲೋಕಸೇವಾ ಆಯೋಗಗಳ ಅಧ್ಯಕ್ಷರ 25ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅನಿವಾರ್ಯತೆ ಎಂಬುದು ಒಂದು ರೀತಿಯ ಕಟ್ಟುಕತೆ. ಈ ದೇಶದಲ್ಲಿ ಪ್ರತಿಭೆ ಹೇರಳವಾಗಿದೆ. ಯಾರೂ ಅನಿವಾರ್ಯವಲ್ಲ. ಆದ್ದರಿಂದ, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಸಾರ್ವಜನಿಕ ಸೇವಾ ಆಯೋಗಗಳು ಅಂತಹ ಸಂದರ್ಭಗಳಲ್ಲಿ ಪಾತ್ರವನ್ನು ಹೊಂದಿರುವಾಗ, ಅವು ದೃಢವಾಗಿರಬೇಕು ಎಂದು ಧಂಕರ್ ಅಭಿಪ್ರಾಯಪಟ್ಟರು. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜನ ಕೇಂದ್ರೀಕೃತವಾಗಿದ್ದುಕೊಂಡು ಭವಿಷ್ಯದ ಸವಾಲುಗಳನ್ನು ಎದುರಿಸುವಂತಹ ಆಡಳಿತ ವೈಖರಿಯನ್ನು ಲೋಕಸೇವಾ ಆಯೋಗ ಅಳವಡಿಸಿಕೊಳ್ಳಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


