ರಾಜ್ಯ

ಪ್ರಯಾಣಿಕರಿಗೆ ನ್ಯೂ ಇಯರ್ ಶಾಕ್: ಬಸ್ ಟಿಕೆಟ್ ದರ ಶೇ.15 ರಷ್ಟು ಹೆಚ್ಚಳಕ್ಕೆ ಸಂಪುಟ ಅಸ್ತು

ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.

ಪ್ರಯಾಣಿಕರಿಗೆ ನ್ಯೂ ಇಯರ್ ಶಾಕ್: ಬಸ್ ಟಿಕೆಟ್ ದರ ಶೇ.15 ರಷ್ಟು ಹೆಚ್ಚಳಕ್ಕೆ ಸಂಪುಟ ಅಸ್ತು
ಸಿಎಂ ಸಿದ್ದರಾಮಯ್ಯ
Published On :

ಬೆಂಗಳೂರು: ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಸೇರಿದಂತೆ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವೆ ಎಚ್​ಕೆ ಪಾಟೀಲ್ ಅವರು, ಬಸ್​ ಟಿಕೆಟ್​ ದರ ಹೆಚ್ಚಳಕ್ಕೆ ಸಚಿವ ಸಂಪುಟ ನಿರ್ಧರಿಸಿದ್ದು, ಜನವರಿ 5ರಿಂದ ಪರಿಷ್ಕೃತ ಟಿಕೆಟ್​ ದರ ಅನ್ವಯವಾಗಲಿದೆ ಎಂದರು.

ನಾಲ್ಕು ಸಾರಿಗೆ ನಿಗಮಗಳ ಟಿಕೆಟ್​ ದರ ಪರಿಷ್ಕರಿಸಿದ್ದೇವೆ. ಟಿಕೆಟ್​ ದರ ಶೇ.15ರಷ್ಟು ಹೆಚ್ಚಿಸಲು ಅನುಮೋದಿಸಲಾಗಿದೆ. ದರ ಹೆಚ್ಚಳದಿಂದ ನಿತ್ಯ 7.84 ಕೋಟಿ ರೂ. ಆದಾಯ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದರು.

ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಡಬ್ಲ್ಯುಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಈ ಹಿಂದೆ ಶೇ. 40 ರಷ್ಟು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಡೀಸೆಲ್ ಬೆಲೆಯ ಏರಿಕೆಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

'ಬಿಎಂಟಿಸಿ ಬಸ್ ದರಗಳನ್ನು 2015ರಲ್ಲಿ ಮತ್ತು ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಯ ದರಗಳನ್ನು 2020ರಲ್ಲಿ ಪರಿಷ್ಕರಿಸಲಾಯಿತು. ಈಗ ಡೀಸೆಲ್ ಮತ್ತು ಬಿಡಿಭಾಗಗಳ ಬೆಲೆಗಳು ಏರಿಕೆಯಾಗಿವೆ. ಜತೆಗೆ ಸಿಬ್ಬಂದಿ ವೇತನವೂ ಹೆಚ್ಚಿದೆ. ಈ ಎಲ್ಲ ಕಾರಣಗಳಿಂದ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಬಿಎಂಟಿಸಿ ಬಸ್ ದರವನ್ನು ಜನವರಿ 10, 2015 ರಂದು ಹೆಚ್ಚಳ ಮಾಡಲಾಗಿತ್ತು. ಹಾಗ ಡೀಸೆಲ್ ಬೆಲೆ ಲೀಟರ್‌ಗೆ 60.90 ರೂ. ಇತ್ತು. 10 ವರ್ಷಗಳ ಹಿಂದೆ ನಾಲ್ಕು ಸಾರಿಗೆ ನಿಗಮಗಳಿಗೆ ನಿತ್ಯ 9.16 ಕೋಟಿ ರೂ. ಡೀಸೆಲ್ ಬಳಕೆಯಾಗುತ್ತಿತ್ತು. ಈಗ ಅದು 13.21 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ ಟಿಕೆಟ್ ದರ ಪರಿಷ್ಕರಣೆ ಅಗತ್ಯ ಎಂದು ಪಾಟೀಲ್ ಸಮರ್ಥಿಸಿಕೊಂಡರು.

ರಾಜ್ಯ ಸರ್ಕಾರವು 2,000 ಕೋಟಿ ರೂಪಾಯಿಯ ಎಲ್ಲಾ ಭವಿಷ್ಯ ನಿಧಿ(ಪಿಎಫ್) ಬಾಕಿಗಳನ್ನು ತೆರವುಗೊಳಿಸಿದೆ ಎಂದು ಸಚಿವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.