ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸು: ಮಾರ್ಚ್ 15ರಂದು ವಿಚಾರಣೆ
ಯಡಿಯೂರಪ್ಪ ಅವರ ಜೊತೆ ಸಹ-ಆರೋಪಿಗಳಾದ ವೈ.ಎಂ. ಅರುಣಾ, ರುದ್ರೇಶ ಮತ್ತು ಮರುಳಸಿದ್ಧಯ್ಯ ಜಿ. ಮರಿಸ್ವಾಮಿ ಅವರಿಗೆ ಸಹ ಸಮನ್ಸ್ ಜಾರಿ ಮಾಡಿ ಮಾರ್ಚ್ 15ರಂದು ವಿಚಾರಣೆ ನಿಗದಿಪಡಿಸಿದೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮುಂದೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ 1 ನೇ ತ್ವರಿತಗತಿ ನ್ಯಾಯಾಲಯ ಸೂಚಿಸಿ ಸಮನ್ಸ್ ಜಾರಿ ಮಾಡಿದೆ.
ಯಡಿಯೂರಪ್ಪ ಅವರ ಜೊತೆ ಸಹ-ಆರೋಪಿಗಳಾದ ವೈ.ಎಂ. ಅರುಣಾ, ರುದ್ರೇಶ ಮತ್ತು ಮರುಳಸಿದ್ಧಯ್ಯ ಜಿ. ಮರಿಸ್ವಾಮಿ ಅವರಿಗೆ ಸಹ ಸಮನ್ಸ್ ಜಾರಿ ಮಾಡಿ ಮಾರ್ಚ್ 15ರಂದು ವಿಚಾರಣೆ ನಿಗದಿಪಡಿಸಿದೆ.
ಪೋಕ್ಸೋ ಪ್ರಕರಣದಲ್ಲಿ ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಬಿ.ಎಸ್. ಯಡಿಯೂರಪ್ಪ ಅವರಿಗೆ ದೊಡ್ಡ ರಿಲೀಫ್ ನೀಡಿದ ಹೈಕೋರ್ಟ್, ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸೂಚಿಸಿತ್ತು. ವಿಚಾರಣೆಗೆ ಮೊದಲು ಹಾಜರಾತಿಯಿಂದ ವಿನಾಯಿತಿ ನೀಡಲಾಗಿತ್ತು.
ಪ್ರಕರಣ ರದ್ದತಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಧಾರವಾಡ ಪೀಠ, ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ, ಪ್ರಕರಣ ರದ್ದು ಮಾಡಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಿರಾಕರಿಸಿತ್ತು. ಹೀಗಾಗಿ ಯಡಿಯೂರಪ್ಪ ಬಂಧನದಿಂದ ಪಾರಾದರೂ ವಿಚಾರಣೆ ಎದುರಿಸಲೇಬೇಕಾಗಿದೆ. ಆದ್ದರಿಂದ ಇದೀಗ ಬೆಂಗಳೂರಿನ ನ್ಯಾಯಾಲಯ ವಿಚಾರಣೆಗೆ ದಿನ ನಿಗದಿಪಡಿಸಿದೆ.
ಏನಿದು ಪ್ರಕರಣ
ಬಿ ಎಸ್ ಯಡಿಯೂರಪ್ಪ ಅವರ ಬಳಿ ಸಹಾಯ ಕೋರಿ ತಾಯಿ ಮತ್ತು ಅವರ ಅಪ್ರಾಪ್ತ ವಯಸ್ಸಿನ ಮಗಳು ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಅವರ ನಿವಾಸಕ್ಕೆ ಬಂದಿದ್ದಾದ ಬಾಲಕಿಯನ್ನು ಕೋಣೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬಾಲಕಿಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಬಳಿಕ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



