ತಡರಾತ್ರಿವರೆಗೂ ಠಾಣೆಯಲ್ಲಿ ಗರ್ಭಿಣಿ ಮಹಿಳೆ ಪರದಾಟ: ನಿಯಮ-ಮಾನವೀಯತೆ ಮರೆತರೇ ನಗರದ ಪೊಲೀಸರು?
ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಳೆದ ದಿನ ರಾತ್ರಿ ತಡರಾತ್ರಿಯವರೆಗೂ ಗರ್ಭಿಣಿ ಮಹಿಳೆ ಪರದಾಡಿದ್ದಾರೆ. ರಾತ್ರಿ 10 ಗಂಟೆವರೆಗೂ ಠಾಣೆಯಲ್ಲಿ ನಾಲ್ಕು ತಿಂಗಳ ಗರ್ಭಿಣಿಯನ್ನು ಇರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರು ತಡರಾತ್ರಿವರೆಗೂ ಸಂಕಷ್ಟ ಅನುಭವಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಳೆದ ದಿನ ರಾತ್ರಿ ತಡರಾತ್ರಿಯವರೆಗೂ ಗರ್ಭಿಣಿ ಮಹಿಳೆ ಪರದಾಡಿದ್ದಾರೆ. ರಾತ್ರಿ 10 ಗಂಟೆವರೆಗೂ ಠಾಣೆಯಲ್ಲಿ ನಾಲ್ಕು ತಿಂಗಳ ಗರ್ಭಿಣಿಯನ್ನು ಇರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.
ನಿಯಮದ ಪ್ರಕಾರ ಗರ್ಭಿಣಿ ಮಹಿಳೆಯನ್ನು ಸಂಜೆ ಆರು ಗಂಟೆ ಒಳಗೆ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಬೇಕು. ಆದರೆ ರಾತ್ರಿ 10 ಗಂಟೆವರೆಗೆ ಠಾಣೆಯಲ್ಲಿಯೇ ಪೊಲೀಸರು ಗರ್ಭಿಣಿಯನ್ನು ಇರಿಸಿಕೊಂಡಿದ್ದು, ಈ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ರಾತ್ರಿ 10 ಗಂಟೆ ಬಳಿಕ ಪೊಲೀಸರಿಂದ ಸಖಿ ಕೇಂದ್ರಕ್ಕೆ ಗರ್ಭಿಣಿಯನ್ನು ಶಿಫ್ಟ್ ಮಾಡಲಾಗಿದೆ. ಹೀಗಾಗಿ ಪೊಲೀಸರ ಮೇಲೆ ಕರ್ತವ್ಯ ಲೋಪದ ಆರೋಪ ಕೇಳಿ ಬಂದಿದೆ.
ನಿಯಮಗಳ ಪ್ರಕಾರ ಸಂಜೆ 6 ಗಂಟೆ ನಂತರ ಯಾವುದೇ ಮಹಿಳೆಯನ್ನು ಠಾಣೆಗೆ ಕರೆತರುವಂತಿಲ್ಲ. ಜೊತೆಗೆ ಠಾಣೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಆದರೆ,. ಇಲ್ಲಿ ಪೊಲೀಸರು ಆ ನಿಯಮವನ್ನು ಉಲ್ಲಂಘಿಸಿದ್ದಾರೆ. ಒಬ್ಬ ಗರ್ಭಿಣಿ ಅನ್ನೋದನ್ನು ನೋಡದೆ ಪೊಲೀಸರು ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಏನಿದು ಪ್ರಕರಣ?
ಕೆಸಿ ಜನರಲ್ ಆಸ್ಪತ್ರೆಗೆ ನಿಯಮಿತ ತಪಾಸಣೆಗಾಗಿ ನಾಲ್ಕು ತಿಂಗಳ ಗರ್ಭಿಣಿ ತೆರಳಿದ್ದು, ಈ ವೇಳೆ ಆಸ್ಪತ್ರೆಯ ವೈದ್ಯರು ಗರ್ಭಿಣಿಯ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆಕೆಗೆ ವಯಸ್ಸು 18 ವರ್ಷ, 1 ತಿಂಗಳು ಮತ್ತು 20 ದಿನಗಳು ಎಂಬುದು ಗೊತ್ತಾಗಿದೆ. ಯುವತಿ 4 ತಿಂಗಳ ಗರ್ಭಿಣಿಯಿರುವ ಕಾರಣ 18 ವರ್ಷಕ್ಕೂ ಮೊದಲೇ ಮದುವೆಯಾಗಿರುವುದು ಗೊತ್ತಾಗಿದೆ. ಅಂದರೆ ಬಾಲ್ಯವಿವಾಹವಾಗಿರುವುದು ತಿಳಿದುಬಂದಿದೆ. ಹೀಗಾಗಿ ಈ ಬಗ್ಗೆ ಶೇಷಾದ್ರಿಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡಿದ್ದಾರೆ. ಮಧ್ಯಾಹ್ನ ಎರಡು ಗಂಟೆಗೆ ಪತಿ ಹಾಗೂ ಪತ್ನಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ಪೊಲೀಸರು ರಾತ್ರಿ ಹತ್ತು ಗಂಟೆವರೆಗೂ ಅವರನ್ನು ಕೂರಿಸಿ ಕಾಲಹರಣ ಮಾಡಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್ ಈ ಬಗ್ಗೆ ಇಲಾಖಾ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದರು.
ಈ ಬಗ್ಗೆ ವರದಿಯನ್ನು ಕೋರಲಾಗಿದ್ದು, ಶೇಷಾದ್ರಿಪುರಂ ಪೊಲೀಸ್ ಅಧಿಕಾರಿಗಳ ವಿರುದ್ಧದ ಆರೋಪಗಳ ತನಿಖೆ ನಡೆಸಲು ಕೇಂದ್ರ ವಿಭಾಗದ ಡಿಸಿಪಿ ಮತ್ತು ಶೇಷಾದ್ರಿಪುರಂ ಉಪ ವಿಭಾಗದ ಎಸಿಪಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



