ನೀರಿನ ಲಭ್ಯತೆ ಆಧಾರಿಸಿ ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ 2ನೇ ಹಂತ ಜಾರಿ
ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯ ಎರಡನೇ ಹಂತದ ಅನುಷ್ಠಾನಕ್ಕೆ ನೀರಿನ ಲಭ್ಯತೆ ನೋಡಬೇಕಿದೆ. ನೀರಿಲ್ಲದೇ ಹೇಗೆ ಕೆಲಸ ಮಾಡುವುದು ಹೇಗೆ?

ಬೆಳಗಾವಿ: ನೀರಿನ ಲಭ್ಯತೆ ಆಧಾರದ ಮೇಲೆ ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ 2ನೇ ಹಂತವನ್ನು ಜಾರಿಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಕಟಾಕದೊಂಡ ವಿಠ್ಠಲದೊಂಡಿಬಾ ಅವರ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ಉತ್ತರಿಸಿದರು.
ಹೊರ್ತಿ ರೇವಣಸಿದ್ದೇಶ್ವರ ಯೋಜನೆಯ ಎರಡನೇ ಹಂತವನ್ನು ಯಾವಾಗ ಪ್ರಾರಂಭ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯ ಎರಡನೇ ಹಂತದ ಅನುಷ್ಠಾನಕ್ಕೆ ನೀರಿನ ಲಭ್ಯತೆ ನೋಡಬೇಕಿದೆ. ನೀರಿಲ್ಲದೇ ಹೇಗೆ ಕೆಲಸ ಮಾಡುವುದು ಹೇಗೆ? ಆಲಮಟ್ಟಿಯ 2.5 ಟಿಎಂಸಿ ನೀರನ್ನು ಬಳಸಿಕೊಂಡು 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಯೋಜನೆ ಇದಾಗಿದೆ ಎಂದು ಹೇಳಿದರು.
ಆಲಮಟ್ಟಿ 3ನೇ ಹಂತದ ವಿಚಾರವಾಗಿ ಇನ್ನೂ ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಅದಕ್ಕಾಗಿ ನಾವು ಕಾರ್ಯಸಾಧ್ಯತೆಗಳನ್ನು ನೋಡುತ್ತಿದ್ದೇವೆ. ಎರಡನೇ ಹಂತದ ಕೆಲಸ ಪೂರ್ಣಗೊಳಿಸಲು ನಾವೂ ಉತ್ಸುಕರಾಗಿದ್ದೇವೆ. ಆದರೆ, ನೀರಿನ ಲಭ್ಯತೆ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು.
ಹೊರ್ತಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯ ಮೊದಲನೇ ಹಂತದ ಕಾಮಗಾರಿಯನ್ನು 2,638 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 3.24 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು. ಇದರಿಂದ 6 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಅನುಕೂಲವಾಗಲಿದೆ.
ಆಲಮಟ್ಟಿ ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ವಿಚಾರವಾಗಿ ದೊಡ್ಡ ತೀರ್ಮಾನ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ನೋಡಿಕೊಂಡು ಕೆಲಸವನ್ನು ತೆಗೆದುಕೊಳ್ಳುತ್ತೇವೆಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



