ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಮರ್ಡರ್ ಕೇಸ್: ಬಜರಂಗದಳ ಕಾರ್ಯಕರ್ತ ಬಂಧನ
ಬಜರಂಗದಳ ಕಾರ್ಯಕರ್ತ ಮಿಥುನ್ ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಚಿಕ್ಕಮಗಳೂರು ನಗರದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗಿದೆ.

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಕೊಲೆ ಪ್ರಕರಣದಲ್ಲಿ ಬಜರಂಗ ದಳ ಕಾರ್ಯಕರ್ತನೊಬ್ಬನನ್ನು ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಗಣೇಶ್ ಗೌಡ(38) ಕೊಲೆಯಾದವರು. ಇವರು ಸಖರಾಯಪಟ್ಟಣ ಗ್ರಾಪಂ ಸದಸ್ಯರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸಂಜಯ್, ಭೂಷಣ್, ಮಿಥುನ್ ಎಂಬವರು ಸೇರಿದಂತೆ ಬಿಜೆಪಿ, ಬಜರಂಗದಳದ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದೀಗ ಪ್ರಕರಣದಲ್ಲಿ ಮಿಥುನ್ ಪಾತ್ರ ಇರುವುದು ದೃಢಪಟ್ಟ ಹಿನ್ನೆಲೆ ಆತನನ್ನು ಬಂಧಿಸಲಾಗಿದ್ದು, ಚಿಕ್ಕಮಗಳೂರು ನಗರದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಗಣೇಶ್ ಹತ್ಯೆಯಲ್ಲಿ ಎ6 ಆಗಿರುವ ಮಿಥುನ್ ಎ1 ಸಂಜಯ್ ಸ್ನೇಹಿತನಾಗಿದ್ದಾನೆ. ಈತ ಆರ್'ಎಸ್ಎಸ್ ಮತ್ತು ಬಜರಂಗದಳದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದಾನೆಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಎ1 ಸಂಜಯ್ ಮತ್ತು ಎ3 ನಾಗಭೂಷಣ್ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಎ2 ನಿತಿನ್, ಎ4 ದರ್ಶನ್ ಹಾಗೂ ಅಜಯ್ಗಾಗಿ ಹುಡುಕಾಟ ಮುಂದುವರಿದಿದೆ. ಗಣೇಶ್ ಹತ್ಯೆ ಬಳಿಕ ಈ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಸಖರಾಯಪಟ್ಟಣದಲ್ಲಿ ಎರಡು ದಿನಗಳ ಹಿಂದೆ ದತ್ತ ಜಯಂತಿಯ ಬ್ಯಾನರ್ ತೆರವು ವಿಚಾರವಾಗಿ ಎರಡು ತಂಡಗಳ ಮಧ್ಯೆ ಗಲಾಟೆ ನಡೆದಿತ್ತು.
ಇದೇ ವಿಚಾರವಾಗಿ ಈ ತಂಡಗಳ ಮಧ್ಯೆ ಶುಕ್ರವಾರ ರಾತ್ರಿಯೂ ಸಖರಾಯಪಟ್ಟಣ ಬಾರ್ ಬಳಿ ಗಲಾಟೆ ನಡೆದಿತ್ತು. ಇದಾಗಿ ಅರ್ಧ ಗಂಟೆಯ ಬಳಿಕ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ಚರ ಮಠದ ಬಳಿ ಗಣೇಶ್ ಗೌಡರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಕಲ್ಮರಡಿ ಮಠದ ರಸ್ತೆಯಲ್ಲಿ ಗಣೇಶ್ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕಿನಲ್ಲಿ ಅಡ್ಡಗಟ್ಟಿದ ಎಂಟು ಮಂದಿಯಿದ್ದ ಹಂತಕರ ತಂಡ ಅವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ಮಾಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಘಟನೆ ಬಳಿಕ ಆರೋಪಿಗಳ ಪತ್ತೆಗೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ನೇತೃತ್ವದಲ್ಲಿ 4 ತಂಡ ರಚಿಸಿ ಶೋಧ ನಡೆಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



