ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
ಸಾರ್ವಜನಿಕ ಸೇವಕರ ವಿರುದ್ಧದ ಪ್ರಕರಣಗಳನ್ನು ಮರು ತನಿಖೆಗೆ ಕೋರ್ಟ್ ಮತ್ತು ಸರ್ಕಾರದ ಪೂರ್ವಾನುಮತಿ ಬೇಕೋ ಬೇಡವೋ ಎಂಬುದರ ಜಿಜ್ಞಾಸೆ ಉಂಟಾಗಿದ್ದು, ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಅಕ್ರಮ ಡಿನೋಟಿಫಿಕೇಶನ್ ಸೇರಿದಂತೆ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಪೂರ್ವಾನುಮತಿ ಬೇಕೇ ಬೇಡವೇ ಎಂಬ ಜಿಜ್ಞಾಸೆಯನ್ನು ಇತ್ಯರ್ಥ ಮಾಡಲು ಸುಪ್ರೀಂ ಕೋರ್ಟ್ ವಿಸ್ತೃತ ಪೀಠ ರಚಿಸಲಿದೆ.
2011ರ ಭೂ ಡಿನೋಟಿಫಿಕೇಶನ್ ರದ್ದುಗೊಳಿಸುವಂತೆ ಬಿಎಸ್ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಸುಪ್ರೀಂ ಕೋರ್ಟ್ ನ್ಯಾ. ಜೆ.ಬಿ. ಪರ್ದಿವಾಲ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠವು ತೀರ್ಪು ಪ್ರಕಟಿಸಿತು.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಾರ್ವಜನಿಕ ಸೇವಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಾಥಮಿಕ ಪೂರ್ವಾನುಮತಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪೊಲೀಸರು ಯಾವುದೇ ವಿಚಾರಣೆ ಅಥವಾ ತನಿಖೆಯನ್ನು ಪ್ರಾರಂಭಿಸಲು ಅನುಮೋದನೆ ಪಡೆಯುವ ಮೊದಲು ಸೂಕ್ತ ಪ್ರಾಧಿಕಾರ ಅಥವಾ ಸರ್ಕಾರವು ಪರಿಶೀಲಿಸಬೇಕಾದ ಪಿಸಿ ಕಾಯ್ದೆಯ ಸೆಕ್ಷನ್ 17ಎನಲ್ಲಿ ಪರಿಗಣಿಸಲಾದ ಸಂಬಂಧಿತ ಪರಿಗಣನೆಗಳು ಯಾವುದು ಎಂಬುದರ ಕುರಿತು ನಿರ್ಣಯಿಸಬೇಕಾಗಿದೆ ಎಂದು ಕೋರ್ಟ್ ಹೇಳಿದೆ.
ಏಪ್ರಿಲ್ 4ರಂದು ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿರುವ ಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರಿನ ಉದ್ಯಮಿ ಎ.ಆಲಂ ಪಾಷಾ ಅವರು ಯಡಿಯೂರಪ್ಪ ವಿರುದ್ಧ ತಾವು ನೀಡಿರುವ ದೂರನ್ನು ಪುನಸ್ಥಾಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ 5 ಜನವರಿ 2021 ರಂದು ಮಾನ್ಯ ಮಾಡಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದೀವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಏಪ್ರಿಲ್ 4ರಂದು ವಿಚಾರಣೆ ಪೂರ್ಣಗೊಳಿಸಿತು.
ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ‘ಕರ್ನಾಟಕ ಉದ್ಯೋಗ ಮಿತ್ರ’ ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಕೆ.ಎಸ್ ವಿರುದ್ಧ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಸಂಚು ಆರೋಪ ಮಾಡಿದ್ದರು. ದೇವನಹಳ್ಳಿಯಲ್ಲಿ 2011ರಲ್ಲಿ26 ಎಕರೆ ಡಿನೋಟಿಫಿಕೇಷನ್ ಮಾಡಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಆಲಂ ಪಾಷಾ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಯಡಿಯೂರಪ್ಪ ಹಾಗೂ ನಿರಾಣಿ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ 2021ರ ಜನವರಿ 27ರಂದು ಆದೇಶ ನೀಡಿತ್ತು.
ಸಾರ್ವಜನಿಕ ಸೇವಕರ ವಿರುದ್ಧದ ಪ್ರಕರಣಗಳನ್ನು ಮರು ತನಿಖೆಗೆ ಕೋರ್ಟ್ ಮತ್ತು ಸರ್ಕಾರದ ಪೂರ್ವಾನುಮತಿ ಬೇಕೋ ಬೇಡವೋ ಎಂಬುದರ ಜಿಜ್ಞಾಸೆ ಉಂಟಾಗಿದ್ದು, ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


