News Headlines 19-04-25 | ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಕೇಸ್: ಇಬ್ಬರ ಅಮಾನತು; ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿ; KSRTC ಬಸ್‌ಗಳ ಮೇಲಿನ ಸಿಗರೇಟು, ಮದ್ಯ ಉತ್ಪನ್ನಗಳ ಜಾಹೀರಾತು ತೆರವು!

1. ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ: ಇಬ್ಬರ ಅಮಾನತು
ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಪಿಯು ಕಾಲೇಜಿನ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯಲು ಹೇಳಿದ ಪರೀಕ್ಷಾ ಕೇಂದ್ರದಲ್ಲಿ ನಿಯೋಜಿತರಾದ ಇಬ್ಬರು ಹೋಮ್ ಗಾರ್ಡ್ಸ್ ಗಳನ್ನು ಅಮಾನತು ಮಾಡಲಾಗಿದೆ. ರಾಜ್ಯ ಬ್ರಾಹ್ಮಣ ಸಭಾದ ನಟರಾಜ್ ಭಾಗವತ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೂಚನೆ ಮೇರೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇಬ್ಬರು ಗೃಹ ರಕ್ಷಕರನ್ನು ಅಮಾನತುಗೊಳಿಸಿದ್ದು, ಸಿಇಟಿ ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿದೆ.
2. ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ: ಮುತ್ತಪ್ಪರೈ 2ನೇ ಪತ್ನಿ ಸೇರಿ ನಾಲ್ವರು ವಿರುದ್ಧ FIR
ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ 35 ವರ್ಷದ ರಿಕ್ಕಿ ರೈ ಮೇಲೆ ಬಿಡದಿದ ಕರಿಯಪ್ಪನದೊಡ್ಡಿಯಲ್ಲಿ ಕಳೆದ ರಾತ್ರಿ ಗುಂಡಿನ ದಾಳಿ ನಡೆದಿದೆ. ಮನೆಯಿಂದ ಹೊರಬರುತ್ತಿದ್ದಂತೆ ಕಾರಿನ ಚಕ್ರಕ್ಕೆ ಗುಂಡು ಹಾರಿಸಿದ್ದಾರೆ. ಒಂದು ಗುಂಡು ರಿಕ್ಕಿ ರೈ ಮೂಗು ಮತ್ತು ಬಲಗೈಗೆ ಬಿದ್ದಿದ್ದು ಅದೃಷ್ಠವಶಾತ್ ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಇನ್ನು ಗುಂಡಿನ ದಾಳಿಗೆ ಸಂಬಂಧಿಸಿದಂತೆ ರಿಕ್ಕಿ ಅವರ ಕಾರು ಚಾಲಕ ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈ ಆಪ್ತ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ರಿಕ್ಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಕ್ಕಿ ರೈ ಮೇಲೆ ಗುಂಡಿನ ದಾಳಿಯಾಗಿದೆ. ಯಾವ ಕಾರಣಕ್ಕೆ ದಾಳಿ ನಡೆಸಿದ್ದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
3. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ
ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಶಿವಪ್ಪ ನಾಯಕ ಅರಮನೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಇಬ್ಬರೂ ನಾಯಕರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಕಾಂಗ್ರೆಸ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಕಳೆದ ಬುಧವಾರ ಸಂಸದ ಬಿ.ವೈ.ರಾಘವೇಂದ್ರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿದರು. ಪ್ರಕರಣದ ವಿರುದ್ಧ ಕೋರ್ಟ್‌ನಲ್ಲಿ ಹೋರಾಡುವ ಬದಲು, ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
4. KSRTC ಬಸ್‌ಗಳ ಮೇಲಿನ ಸಿಗರೇಟು, ಮದ್ಯ ಉತ್ಪನ್ನಗಳ ಜಾಹೀರಾತು ತೆರವು
KSRTC ಬಸ್‌ಗಳ ಮೇಲಿನ ತಂಬಾಕು, ಸಿಗರೇಟು, ಮದ್ಯ ಉತ್ಪನ್ನಗಳ ಜಾಹೀರಾತುಗಳನ್ನು ಕೂಡಲೇ ಸಂಪೂರ್ಣ ತೆರವುಗೊಳಿಸುವಂತೆ ಮುಖ್ಯಮಂತ್ರಿ ಕಚೇರಿ ಸೂಚನೆ ನೀಡಿದೆ. KSRTC ಹಾಗೂ ಸಂಬಂಧಪಟ್ಟ ಜಾಹೀರಾತು ಪರವಾನಗಿದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಜಾಹೀರಾತುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಸಿರಾಜ್ ಎಂಬುವರು ಸಾಮಾಜಿಕ ಮಾಧ್ಯಮದ ಮೂಲಕ ಬಸ್ ಗಳಲ್ಲಿ ತಂಬಾಕು ಜಾಹೀರಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ತಂಬಾಕು, ಸಿಗರೇಟ್ ಮತ್ತು ಮದ್ಯದಂತಹ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದು ಸಮಾಜಕ್ಕೆ ಒಳ್ಳೆಯದಲ್ಲ. ಸಮಾಜದ ಹಿತದೃಷ್ಟಿಯಿಂದ ಅಂತಹ ಜಾಹೀರಾತುಗಳನ್ನು ಪ್ರದರ್ಶಿಸದಂತೆ ಮನವಿ ಮಾಡಿದ್ದರು.
5. ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ರಥೋತ್ಸವದ ವೇಳೆ ತೇರು ಮುರಿದು ಬಿದ್ದು ದುರ್ಘಟನೆ
ಮಂಗಳೂರಿನ ಮೂಲ್ಕಿ ತಾಲ್ಲೂಕಿನ ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ರಥೋತ್ಸವದ ವೇಳೆ ತೇರು ಮುರಿದು ಬಿದ್ದ ಘಟನೆ ನಡೆದಿದೆ. ಮಧ್ಯರಾತ್ರಿ ಈ ಘಟನೆ ನಡೆದಿದ್ದು, ರಥೋತ್ಸವದಲ್ಲಿ ಭಾಗಿಯಾಗಲು ಹಲವು ಭಾಗಗಳಿಂದ ಭಕ್ತರ ದಂಡೇ ನೆರೆದಿತ್ತು. ರಥ ಬೀದಿಗಳಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ. ತೇರಿನ ಮೇಲ್ಬಾಗ ಕುಸಿದ ವೇಳೆ ಅರ್ಚಕರು ತೇರಿನಲ್ಲೇ ಇದ್ದರು. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ. ಇನ್ನು ರಥೋತ್ಸವದ ವೇಳೆ ತೇರು ಕುಸಿದ ಕಾರಣ ಭಕ್ತರ ಸಮೂಹದಲ್ಲಿ ಆತಂಕ ಹೆಚ್ಚಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


