ರಾಜ್ಯ

ಆನೇಕಲ್‌: Facebook ವಿಡಿಯೋ ಮಾಡಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ!

ಆನೇಕಲ್ ನ ಎಸ್.ವಿ.ಎಂ ಸ್ಕೂಲ್ ಬಳಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು (35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆನೇಕಲ್‌: Facebook ವಿಡಿಯೋ ಮಾಡಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಕರ್ನಾಟಕದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣಾಗಿದ್ದು, ಈ ಬಾರಿ ಬೆಂಗಳೂರು ಹೊರವಲಯದ ಆನೇಕಲ್‌ ನಲ್ಲಿ ಪ್ರವೀಣ್ ಗೌಡ ಎಂಬುವವರು ಫೇಸ್ ಬುಕ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ನಾಗವಾರದಲ್ಲಿ ಬಿಜೆಪಿ ಕಾರ್ಯಕರ್ತ (BJP Worker) ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ನೆನಪು ಹಸಿಯಾಗಿರುವಾಗಲೇ ಬೆಂಗಳೂರು ನಗರ ಜಿಲ್ಲೆ ಆನೇಕಲ್ ನಲ್ಲೂ ಇಂತಹುದೇ ಮತ್ತೊಂದು ಪ್ರಕರಣ ವರದಿಯಾಗಿದೆ.

ಆನೇಕಲ್ ನ ಎಸ್.ವಿ.ಎಂ ಸ್ಕೂಲ್ ಬಳಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು (35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೇಸ್ಬುಕ್ ವಿಡಿಯೋ ಮಾಡಿ ಹಲವರ ಹೆಸರುಗಳನ್ನು ಪ್ರಸ್ತಾಪಿಸಿರುವ ಪ್ರವೀಣ್, ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಬಿಜೆಪಿ ನಾಯಕರಿಂದ ಕಿರುಕುಳ?

ಪ್ರವೀಣ್ ಗೌಡ ತಮ್ಮ ಫೇಸ್ ಬುಕ್ ವಿಡಿಯೋದಲ್ಲಿ ಹಲವರ ಮೇಲೆ ವಂಚನೆ ಮತ್ತು ಹಲ್ಲೆ ಆರೋಪ ಹೊರಿಸಿದ್ದು, ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ಹಾಗೂ ಕೌನ್ಸಿಲರ್ ಭಾಗ್ಯಮ್ಮ ಮತ್ತು ಶ್ರೀನಿವಾಸ್ ವಿರುದ್ಧವೂ ಆರೋಪ ಮಾಡಲಾಗಿದೆ. ಪ್ರಮುಖವಾಗಿ ತಮ್ಮ ಸಾವಿಗೆ ಇವರೇ ಕಾರಣ ಎಂದು ಹಲವರನ್ನು ಹೆಸರಿಸಿರುವ ಅವರು, ಆ ಪೈಕಿ ಕಿರಣ್ ಎಂಬಾತನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ವಿಡಿಯೋದಲ್ಲೇನಿದೆ?

ಸಮಂದೂರ್ ಕಿರಣ್, ಗೋಕುಲ್ ಫ್ಯಾಷನ್ ಹರೀಶ, ಭಾಸ್ಕರ್, ನಾರಾಯಣಪ್ಪ, ದೊಡ್ಡಹಾಗಡೆ ಮಧುಗೌಡ, ಸರವಣ ಇವರೇ ನನ್ನ ಸಾವಿಗೆ ಕಾರಣ. ಯಾರನ್ನು ಬಿಟ್ಟರೂ ಕಿರಣ್​ನನ್ನು ದಯವಿಟ್ಟು ಬಿಡಬೇಡಿ. ಕಿರಣ್ ಹಲವು ಹೆಣ್ಣು ಮಕ್ಕಳಿಗೆ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದಾನೆ. ಕಿರಣ್​ಮಾಡಿರುವ ಇಂತಹ ಕೆಲಸಗಳೆಲ್ಲಾ ನನ್ನ ಮೇಲೆ ಬಂದಿವೆ. ಹಣದ ವಿಚಾರವಾಗಿ ಮಾತುಕತೆಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಪ್ರವೀಣ್ ಫೇಸ್​​ಬುಕ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.

Story image

ಅಂತೆಯೇ ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ವಿರುದ್ಧವೂ ಪ್ರವೀಣ್ ಗಂಭೀರ ಆರೋಪ ಮಾಡಿದ್ದು, 'ಬಿಜೆಪಿ ಮುಖಂಡ ನಾಯನಹಳ್ಳಿ ಮುನಿರಾಜು ಮನೆಗೆ ಕರೆದಿದ್ದರು. ಆ ಸಂದರ್ಭದಲ್ಲಿ ಆನೇಕಲ್ ಕೌನ್ಸಿಲರ್ ಭಾಗ್ಯಮ್ಮ ಹಾಗೂ ಆಕೆಯ ಪತಿ ಶ್ರೀನಿವಾಸ್ ಇದ್ದರು. ಏಕಾಏಕಿ ಹತ್ತಾರು ಮಂದಿಯನ್ನು ಕರೆಸಿಕೊಂಡಿದ್ದ ಭಾಗ್ಯಮ್ಮ ಶ್ರೀನಿವಾಸ್, ಮೊಬೈಲ್ ಕಿತ್ತುಕೊಂಡು 2 ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.

ಮನಸೋ ಇಚ್ಛೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಸತ್ತ ಮೇಲೆ ನನ್ನ ದೇಹದ ಮೇಲಿರುವ ಗಾಯದ ಗುರುತುಗಳನ್ನು ಪರಿಶೀಲಿಸಿ. ಪೊಲೀಸರು ನನಗೆ ನ್ಯಾಯ ಕೊಡಿಸಬೇಕು ಎಂದು ಪ್ರವೀಣ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಗುರುವಾರ ರಾತ್ರಿ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.