News Headlines 10-04-25 | ಸಿದ್ದು ಸರ್ಕಾರದಿಂದ ಹೆಚ್ಚು ಕಮಿಷನ್‌ಗೆ ಡಿಮ್ಯಾಂಡ್; ಕೈ ಸರ್ಕಾರದ ವಿರುದ್ಧ ಜನಾಕ್ರೋಶದ ಕಿಚ್ಚು; ಪ್ರವಾದಿ ಮಹಮ್ಮದ್ ವಿರುದ್ಧ ಹೇಳಿಕೆ; ಯತ್ನಾಳ್ ವಿರುದ್ಧ FIR!

1. ಸಿದ್ದು ಸರ್ಕಾರದಿಂದಲೂ ಹೆಚ್ಚು ಕಮಿಷನ್‌ಗೆ ಡಿಮ್ಯಾಂಡ್: ಗುತ್ತಿಗೆದಾರರ ಸಂಘದ ಆರೋಪ
ರಾಜ್ಯದ ಗುತ್ತಿಗೆದಾರರಿಗೆ ಸಿದ್ದರಾಮಯ್ಯ ಸರ್ಕಾರದಿಂದಲೂ ಪೇಮೆಂಟ್ಗಳು ಆಗುತ್ತಿಲ್ಲ, ಗುತ್ತಿಗೆದಾರರು ಮತ್ತು ಇಲಾಖೆಗಳ ನಡುವೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಹಿಂದಿನ ಸರ್ಕಾರಕ್ಕಿಂತ ಹೆಚ್ಚಿನ ಕಮೀಶನ್ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅರ್ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ಪಾರದರ್ಶಕತೆ ಕಾಯ್ದೆ ಪ್ರಕಾರ ಜೇಷ್ಠತೆ ಆಧಾರದ ಮೇಲೆ ಬಿಲ್ಗಳ ಪಾವತಿ ಅಗಬೇಕು. ಆದರೆ ಸರ್ಕಾರ ಮಾಡುತ್ತಿಲ್ಲ. ರಾಜ್ಯದಲ್ಲಿ ಒಟ್ಟು ಒಂದೂವರೆ ಲಕ್ಷ ಜನ ಗುತ್ತಿಗೆದಾರರಿದ್ದಾರೆ. ಅವರಲ್ಲಿ ಶೇಕಡ 60ರಷ್ಟು ಜನ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರು. ಇವರಿಗೆ ಪೇಮೆಂಟ್ಗಳೇ ಆಗುತ್ತಿಲ್ಲ. ಕೇವಲ ಬಲಾಢ್ಯ ಗುತ್ತಿಗೆದಾರರಿಗೆ ಮಾತ್ರ ಪೇಮೆಂಟ್ ಆಗುತ್ತಿದೆ, ಮಿಕ್ಕವರು ಹೇಗೆ ಬದುಕಬೇಕು? ಎಂದು ಮಂಜುನಾಥ್ ಪ್ರಶ್ನಿಸಿದ್ದಾರೆ. ಅಲ್ಲದೆ ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರಿಗೆ ರೂ.5 ಲಕ್ಷದಿಂದ 50 ಲಕ್ಷದವರೆಗೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
2. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮೇರೆ ಮೀರಿದೆ; ಇದಕ್ಕೆ ಜನಾಕ್ರೋಶ ಸಾಕ್ಷಿ!
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಮತ್ತು ಭ್ರಷ್ಟಾಚಾರ ಮೇರೆ ಮೀರಿದೆ ಎಂಬುದಕ್ಕೆ ರಾಜ್ಯಾದ್ಯಂತ ನಡೆಯುತ್ತಿರುವ 'ಜನಾಕ್ರೋಶ'ವೇ ಸಾಕ್ಷಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. 20 ತಿಂಗಳ ಬಳಿಕ ಸರ್ಕಾರ ಟೇಕಾಫ್ ಆಗುತ್ತಿದೆ ಎಂಬ ಸಚಿವ ಡಿ. ಸುಧಾಕರ್ ಹೇಳಿಕೆ ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿವೆ ಎಂದು ಟೀಕಿಸಿದರು. ರಾಜ್ಯದಾದ್ಯಂತ ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ 'ಜನಾಕ್ರೋಶ ಯಾತ್ರೆ'ಗೆ ಸಿಗುತ್ತಿರುವ ಬೆಂಬಲ ಮತ್ತು ವಿವಿಧ ಜಿಲ್ಲೆಗಳಲ್ಲಿ ಜನರು ವ್ಯಕ್ತಪಡಿಸಿದ ಭಾವನೆಗಳು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಅಶೋಕ್ ತಿಳಿಸಿದರು.
3. ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಶಾಸಕ ಯತ್ನಾಳ್ ವಿರುದ್ಧ FIR
ಪ್ರವಾದಿ ಮಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹುಬ್ಬಳ್ಳಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಹನ್ನಾನ್ ಎಂಬುವರು ವಿಜಯಪುರ ನಗರದ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏಪ್ರಿಲ್ 7ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಯತ್ನಾಳ್, ಪ್ರವಾದಿ ಮುಹಮ್ಮದ್ ಬಾಳಾ ಸಾಹೇಬ್ ಠಾಕ್ರೆ ಮನೆಯಲ್ಲಿ ಜನಿಸಿದರು ಎಂದು ಆಧಾರರಹಿತ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇದು ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿದೆ.
4. ಸಿರಾದಲ್ಲಿ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಸಾಧ್ಯ
ತುಮಕೂರಿನ ಸಿರಾದಲ್ಲಿ ರಾಜ್ಯದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂಬ ಬೇಡಿಕೆ ಬಲಗೊಳ್ಳುತ್ತಿದ್ದು, ಇದಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರು ಸಹ ಬೆಂಬಲಿಸುತ್ತಿದ್ದರು. ಆದರೆ ಮೂಲಸೌಕರ್ಯಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಮಾತ್ರ ಇದು ಕಾರ್ಯಸಾಧ್ಯವಲ್ಲ ಎಂದು ಹೇಳಿದ್ದಾರೆ. ಸಿರಾದಲ್ಲಿ ವಿಮಾನ ನಿಲ್ದಾಣ ಮಾಡಿದರೆ ಅದು ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗುವುದಿಲ್ಲ. ಬದಲಿಗೆ ಜಿಲ್ಲಾ ಅಥವಾ ಪ್ರಾದೇಶಿಕ ವಿಮಾನ ನಿಲ್ದಾಣವಾಗುತ್ತದೆ ಎಂದು ಪಾಟೀಲ್ ಹೇಳಿದ್ದಾರೆ. ಟಿ.ಬಿ.ಜಯಚಂದ್ರ ಸೇರಿದಂತೆ 35 ಕಾಂಗ್ರೆಸ್ ಶಾಸಕರು ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ, ಸಿರಾದಲ್ಲಿ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿ ಎಂದು ಮನವಿ ಪತ್ರ ಸಲ್ಲಿಸಿದ್ದರು. ಇದಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಕೂಡ ಇದಕ್ಕೆ ಧ್ವನಿಗೂಡಿಸಿದ್ದರು.
5. ಪರವಾನಗಿ ಭೂಮಾಪಕರ ಕೆಲಸ ಖಾಯಂ ಮಾಡಲು ಕ್ರಮ
ಪರವಾನಗಿ ಭೂಮಾಪಕರ ಖಾಯಂ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದರು. ವಿಧಾನಸೌಧದ ಮುಂಭಾಗ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ. ಕಂದಾಯ ಇಲಾಖೆ ಸರ್ಕಾರದ ಮಾತೃ ಇಲಾಖೆ ಇದ್ದಂತೆ. ಈ ಇಲಾಖೆ ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ರೈತ ಸಮುದಾಯ ನೆಮ್ಮದಿಯಾಗಿರುತ್ತದೆ. ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ ಎಂದು ಮೆಚ್ಚುಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


