ಚಿಕ್ಕಬಳ್ಳಾಪುರ: ಸಿಟ್ಟಿನ ಭರದಲ್ಲಿ ಶಿಕ್ಷಕಿ ಎಸೆದ ಕೋಲಿನಿಂದ ದೃಷ್ಟಿ ಕಳೆದುಕೊಂಡ ಬಾಲಕ!
ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿ ಮತ್ತು ಇತರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ: ವಿದ್ಯಾರ್ಥಿಯ ಬಾಳಿಗೆ ಬೆಳಕು ಆಗಬೇಕಾದ ಶಿಕ್ಷಕಿ ಒಬ್ಬರು, ವಿದ್ಯಾರ್ಥಿಯ ಬಾಳು ಕತ್ತಲಾಗುವಂತೆ ಮಾಡಿದ ಆರೋಪ ಕೇಳಿ ಬಂದಿದೆ. ಶಿಕ್ಷಕಿ ಸಿಟ್ಟಿನ ಭರದಲ್ಲಿ ಎಸೆದ ಕೋಲು ಆರು ವರ್ಷದ ಬಾಲಕನ ಬಲಗಣ್ಣಿಗೆ ತಗುಲಿ ಉಂಟಾದ ಗಾಯದಿಂದಾಗಿ ಈಗ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾನೆ.
ಒಂದು ವರ್ಷದ ಹಿಂದೆ ಶಿಕ್ಷಕಿ ತರಗತಿಯಲ್ಲಿ ವಿದ್ಯಾರ್ಥಿಗಳ ಮೇಲೆ ಕೋಲು ಎಸೆದಿದ್ದು, ಅದು ಆಕಸ್ಮಿಕವಾಗಿ ಈ ಬಾಲಕನ ಕಣ್ಣಿಗೆ ತಗುಲಿದೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿ ಮತ್ತು ಇತರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್ 6 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸರ್ಕಾರಿ ಶಾಲೆಯ 1ನೇ ತರಗತಿಯಲ್ಲಿ ಈ ಘಟನೆ ನಡೆದಿದ್ದು, ಅಂದು ಗಾಯಗೊಂಡಿದ್ದ ಯಶ್ವಂತ್ ಎಂಬ ವಿದ್ಯಾರ್ಥಿ ಈಗ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ವಿದ್ಯಾರ್ಥಿಗಳನ್ನು ನಿಯಂತ್ರಿಸುವಾಗ, ಶಿಕ್ಷಕಿ ಕುಳಿತ ಜಾಗದಿಂದಲೇ ಸಿಟ್ಟಿನಿಂದ ಕೆಲವರ ಮೇಲೆ ಕೋಲು ಎಸೆದಿದ್ದಾರೆ. ಅದು ಆಕಸ್ಮಿಕವಾಗಿ ಯಶ್ವಂತ್ ಅವರ ಬಲಗಣ್ಣಿಗೆ ತಗುಲಿತ್ತು.
ಆರಂಭದಲ್ಲಿ, ಈ ಗಾಯದ ಪರಿಣಾಮ ಇಷ್ಟು ದೀರ್ಘಕಾಲ ಇರುತ್ತದೆ ಎಂದು ಆತನ ಹೆತ್ತವರಿಗೆ ತಿಳಿದಿರಲಿಲ್ಲ. ಆದರೆ ಕೆಲವು ದಿನಗಳ ನಂತರ ಆತನ ಕಣ್ಣಿನ ಆರೋಗ್ಯ ಸ್ಥಿತಿ ಹದಗೆಟ್ಟಾಗ, ಪೋಷಕರು ಮಗುವನ್ನು ಚಿಂತಾಮಣಿಯ ನೇತ್ರಶಾಸ್ತ್ರಜ್ಞರ ಬಳಿಗೆ ಕರೆದೊಯ್ದಿದ್ದಾರೆ. ಅವರು ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಬಾಲಕನ ಕಣ್ಣನ್ನು ಪರೀಕ್ಷಿಸಿದ ನಂತರ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು. ಆದರೆ ಬಾಲಕನ ಸ್ಥಿತಿ ಸುಧಾರಿಸದಿದ್ದಾಗ, ಬಾಲಕನ ಪೋಷಕರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷೆಯ ನಂತರ ಬಲಗಣ್ಣಿನಲ್ಲಿ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದರ ನಂತರ, ಪೋಷಕರು ಮತ್ತು ಸ್ಥಳೀಯರು ಭಾನುವಾರ ಸಂಜೆ ಬಟ್ಲಹಳ್ಳಿ ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸಿದರು. ನಂತರ ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕಿ ಮತ್ತು ತಾಲ್ಲೂಕು ಬ್ಲಾಕ್ ಶಿಕ್ಷಣ ಅಧಿಕಾರಿ ಸೇರಿದಂತೆ ಇತರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
"ಮಗುವಿನ ಪೋಷಕರು ನೀಡಿದ ದೂರಿನ ಆಧಾರದ ಮೇಲೆ, ದೈಹಿಕ ಹಲ್ಲೆ ಸೇರಿದಂತೆ ಅಪರಾಧಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸಕ್ಷೆನ್ ಗಳಿಡಿಯಲ್ಲಿ ನಾವು ಪ್ರಕರಣ ದಾಖಲಿಸಿದ್ದೇವೆ ಮತ್ತು ಬಾಲ ನ್ಯಾಯ ಕಾಯ್ದೆಯನ್ನು ಜಾರಿಗೊಳಿಸಿದ್ದೇವೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



