ರಾಜ್ಯ

ವ್ಹೀಲಿಂಗ್ ವಿರುದ್ಧ ಟ್ರಾಫಿಕ್ ಪೊಲೀಸರ ಸಮರ: ತಿಂಗಳಲ್ಲಿ 398 ಕೇಸ್, 324 ಮಂದಿ ಬಂಧನ; ಪುಂಡರಿಂದ 1 ಲಕ್ಷ ರೂ ಶೂರಿಟಿ ಪಡೆಯಲು ನಿರ್ಧಾರ

ಮಾರ್ಚ್ 1ರಿಂದ 31ರವರೆಗೆ ನಗರದ ವಿವಿಧ ಸಂಚಾರ ಠಾಣೆಗಳ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಒಂದೇ ತಿಂಗಳಲ್ಲಿ 398 ಪ್ರಕರಣಗಳು ದಾಖಲಾಗಿವೆ.

ವ್ಹೀಲಿಂಗ್ ವಿರುದ್ಧ ಟ್ರಾಫಿಕ್ ಪೊಲೀಸರ ಸಮರ: ತಿಂಗಳಲ್ಲಿ 398 ಕೇಸ್, 324 ಮಂದಿ ಬಂಧನ; ಪುಂಡರಿಂದ 1 ಲಕ್ಷ ರೂ ಶೂರಿಟಿ ಪಡೆಯಲು ನಿರ್ಧಾರ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ವ್ಹೀಲಿಂಗ್‌ನಲ್ಲಿ ಭಾಗಿಯಾಗುವವರ ವಿರುದ್ಧ ನಗರದ ಸಂಚಾರಿ ಪೊಲೀಸರು ಸಮರ ಸಾರಿದ್ದು, ಒಂದೇ ತಿಂಗಳಲ್ಲಿ 398 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಮಾರ್ಚ್ 1ರಿಂದ 31ರವರೆಗೆ ನಗರದ ವಿವಿಧ ಸಂಚಾರ ಠಾಣೆಗಳ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಒಂದೇ ತಿಂಗಳಲ್ಲಿ 398 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 324 ಮಂದಿಯನ್ನು ಬಂಧನಕ್ಕೊಳಪಡಿಸಿದ್ದು, 397 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಬಂಧಿತ 324 ಜನರ ಪೈಕಿ 82 ಮಂದಿ ಅಪ್ರಾಪ್ತ ವಯಸ್ಕರಾಗಿದ್ದು, ಪೊಲೀಸರು 197 ನೋಂದಣಿ ಪ್ರಮಾಣಪತ್ರಗಳನ್ನು (ಆರ್‌ಸಿ) ರದ್ದುಗೊಳಿಸಲು ಮತ್ತು 40 ಚಾಲನಾ ಪರವಾನಗಿಗಳನ್ನು (ಡಿಎಲ್) ಅಮಾನತುಗೊಳಿಸಲು ಶಿಫಾರಸು ಮಾಡಿದ್ದಾರೆ. ಅಲ್ಲದೆ, ನಿಯಮ ಉಲ್ಲಂಘಿಸಿದ ಪುಂಡರಿಂದ ರೂ.1 ಲಕ್ಷ ಶ್ಯೂರಿಟಿ ಬಾಂಡ್ ಪಡೆಯಲು ನಿರ್ಧರಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ಅವರು ತಿಳಿಸಿದ್ದಾರೆ.

ವ್ಹೀಲಿಂಗ್‌ನಲ್ಲಿ ಭಾಗಿಯಾಗುವವರ ವಿರುದ್ಧ ಕಳೆದ ಮೂರು ತಿಂಗಳಿನಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್ಎಸ್ಎಸ್) ಅಡಿಯಲ್ಲಿ 1 ಲಕ್ಷ ರೂಪಾಯಿಯ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. 2ನೇ ಬಾರಿ ವ್ಹೀಲಿಂಗ್‌ನಲ್ಲಿ ತೊಡಗಿದರೆ ಮುಚ್ಚಳಿಕೆ ಪ್ರಕಾರ, ವಾಹನ ಮುಟ್ಟುಗೋಲು ಪ್ರಕ್ರಿಯೆ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವ್ಹೀಲಿಂಗ್‌ನಲ್ಲಿ ಭಾಗಿಯಾದ ಆರೋಪಿಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಮಾದಕ ವಸ್ತು ಸೇವನೆ ಮಾಡಿರುವುದು ಮತ್ತು‌ ಆಯುಧಗಳನ್ನಿಟ್ಟುಕೊಂಡಿರುವುದು ಕಂಡುಬಂದಿದೆ.

ವಿಜಯನಗರ, ಕಾಮಾಕ್ಷಿಪಾಳ್ಯ, ಕೆ.ಜಿ.ಹಳ್ಳಿ, ಮಡಿವಾಳ, ಅಶೋಕನಗರ ವ್ಯಾಪ್ತಿಯಲ್ಲಿ ಅಂತಹ ಪ್ರಕರಣಗಳು ವರದಿಯಾಗಿವೆ. ಆ ಸಂದರ್ಭಗಳಲ್ಲಿ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆಗಳಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ವ್ಯಕ್ತಿ ವೀಲಿಂಗ್ ಮಾಡುವಾಗ ಸಿಕ್ಕಿಬಿದ್ದರೆ, ಅವರ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗುತ್ತದೆ. ನಂತರ, ಆರೋಪಪಟ್ಟಿ ಸಲ್ಲಿಸಲಾಗುತ್ತದೆ. ಎರಡನೇ ಬಾರಿ ಸಿಕ್ಕಿಬಿದ್ದರೆ, 1 ಲಕ್ಷ ರೂ.ಗಳ ಶ್ಯೂರಿಟಿ ಬಾಂಡ್ ನೀಡಬೇಕಾಗುತ್ತದೆ. ಬಾಂಡ್ ನೀಡಲು ವಿಫಲರಾದವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.