ಡಾ. ಶಿವಕುಮಾರ ಸ್ವಾಮೀಜಿಗೆ ಮರಣೋತ್ತರ ಭಾರತ ರತ್ನಕ್ಕೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ- ಸಿಎಂ ಸಿದ್ದರಾಮಯ್ಯ
ಡಾ. ಶಿವಕುಮಾರ ಸ್ವಾಮೀಜಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ 'ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತುಮಕೂರು: ಡಾ. ಶಿವಕುಮಾರ ಸ್ವಾಮೀಜಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ 'ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ರತ್ನ, ಶತಾಯುಷಿ ಡಾ. ಶಿವಕುಮಾರ ಮಹಾಸ್ವಾಮಿಗಳ ಸ್ಮರಣಾರ್ಥ ನಿರ್ಮಿಸಿರುವ "ಸ್ಮೃತಿ ವನ" ಉದ್ಘಾಟಿಸಿ, ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ಬಸವಾದಿ ಶರಣರ ಆಶಯಗಳನ್ನು ಆಚರಿಸಲು ಬದುಕನ್ನು ಮುಡಿಪಾಗಿಟ್ಟು ನುಡಿದಂತೆ ನಡೆದ ಮಹಾಯೋಗಿಗಳಿಗೆ ಭಾರತ ರತ್ನ ನೀಡಬೇಕು. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದರು.
12ನೇ ಶತಮಾನದಲ್ಲೇ ಬಸವಾದಿ ಶರಣರು ಜಾತಿ ರಹಿತ, ವರ್ಗ ರಹಿತ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿಯನ್ನೇ ಮಾಡಿದ್ದರು. ಮನುಷ್ಯ ಕುಲ ಇರುವವರೆಗೂ ಶಾಶ್ವತ ಆಗಿ ಉಳಿಯುವ ಸಂದೇಶ ಮತ್ತು ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಈ ಮೌಲ್ಯಗಳನ್ನು ಪಾಲಿಸುವುದೇ ಬಸವಾದಿ ಶರಣರಿಗೆ ಸಲ್ಲಿಸುವ ಗೌರವ.ಭಾರತ ಸಂವಿಧಾನದ ಆಶಯ ಮತ್ತು ಬಸವಾದಿ ಶರಣರ ಹೋರಾಟದ ಆಶಯ ಒಂದೇ ಆಗಿದೆ. ನಮಗೆ ಸಂವಿಧಾನ ಧರ್ಮಗ್ರಂಥ ಇದ್ದ ಹಾಗೆ. ಜನರ ಬದುಕನ್ನು ಎತ್ತಿರುವುದೇ ಈ ಸಂವಿಧಾನ ಎಂಬ ಧರ್ಮಗ್ರಂಥದ ಆಶಯವಾಗಿದೆ ಎಂದರು.
ಕಾಯಕ ಮತ್ತು ದಾಸೋಹ ಎರಡೂ ಜೀವನ ಮೌಲ್ಯಗಳು. ಈ ಮೌಲ್ಯಗಳನ್ನು ಪೂಜ್ಯರು ತಮ್ಮ ಬದುಕಿನುದ್ದಕ್ಕೂ ಆಚರಿಸಿದ್ದರು. ಇಂದು 10 ಸಾವಿರ ಮಕ್ಕಳು ಮಠದಲ್ಲಿ ವಿದ್ಯೆ, ವಸತಿ, ಅನ್ನ ಪಡೆಯುತ್ತಿದ್ದಾರೆ ಎಂದರೆ ಶಿವಕುಮಾರ ಮಹಾಯೋಗಿಗಳ ಬದುಕಿನ ಆಚರಣೆಯೇ ಕಾರಣ. ಶಿವಕುಮಾರ ಸ್ವಾಮಿಗಳು ಬದುಕಿನುದ್ದಕ್ಕೂ ಅಕ್ಷರ ಸಂಸ್ಕೃತಿ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಶ್ರಮಿಸಿದರು. ಹೀಗಾಗಿ ಶ್ರೀಗಳ ಕಾರ್ಯ, ಕಾಳಜಿ ಮತ್ತು ಅವರ ನಡೆ-ನುಡಿ ಈ ಮಣ್ಣಿನಲ್ಲಿ ಅಜರಾಮರ ಆಗಿ ಉಳಿಯಲಿದೆ ಎಂದು ತಿಳಿಸಿದರು.
ನಂಜುಂಡಪ್ಪ ಅವರ ವರದಿಯಂತೆ ಸರ್ಕಾರ ಕೆಲಸ ಮಾಡುತ್ತಿದೆ. ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದಕ್ಷಿಣ ಮತ್ತು ಉತ್ತರ ಕರ್ನಾಟಕ ನಡುವಿನ ಅಭಿವೃದ್ಧಿಯ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರ ಶ್ರಮಿಸುತ್ತಿದೆ. ಶಿಕ್ಷಣದ ಮೂಲಕ ತಾರತಮ್ಯ ಮತ್ತು ಅಸಮಾನ ಪ್ರಜ್ಞೆಯನ್ನು ಅಳಿಸಲು ಸಾಧ್ಯವಿದೆ. ಬಸವಾದಿ ಶರಣರ ತತ್ವಾದರ್ಶಗಳು ಸಮಾಜದಲ್ಲಿ ಜಾರಿ ಆದಾಗ ಮಾತ್ರ ಸಮಾನ ಅವಕಾಶಗಳು ಸೃಷ್ಟಿಯಾಗಲು ಸಾಧ್ಯ ಎಂದರು.
ಬಸವಾದಿ ಶರಣರ ಆಶಯದಂತೆ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಇದಕ್ಕಾಗಿ ವಾರ್ಷಿಕ 58 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಇವೆಲ್ಲವೂ ಸಮಸಮಾಜದ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ನಮ್ಮ ಸರ್ಕಾರ ಇಟ್ಟ ದಿಟ್ಟ ಹೆಜ್ಜೆಗಳಾಗಿವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


