ಮೈದಾನದ ಗೇಟ್ ಬಿದ್ದು ಮೃತಪಟ್ಟ ಬಾಲಕ: ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ; ತನಿಖೆಗೆ ಸಮಿತಿ ರಚನೆ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಟದ ಮೈದಾನದ ಸಮಸ್ಯೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುತ್ತಿದ್ದು, ಒಂದು ವಾರದೊಳಗೆ ವರದಿಯನ್ನು ಸಲ್ಲಿಸಲು ಕೇಳಲಾಗುವುದು ಎಂದರು.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸೇರಿದ ಮಲ್ಲೇಶ್ವರಂನ ರಾಜಶೇಖರ್ ಆಟದ ಮೈದಾನದಲ್ಲಿ ನಿನ್ನೆ ಭಾನುವಾರ ಸಂಜೆ 4:30 ರ ಸುಮಾರಿಗೆ ಕಬ್ಬಿಣದ ಗೇಟ್ ಮುರಿದು ಬಿದ್ದು ಮೃತಪಟ್ಟ 10 ವರ್ಷದ ಬಾಲಕ ನಿರಂಜನ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೃತ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ, ಬಿಬಿಎಂಪಿಯಿಂದ 5 ಲಕ್ಷ ರೂಪಾಯಿ ಮತ್ತು ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ 5 ಲಕ್ಷ ರೂಪಾಯಿ ಸೇರಿ ಒಟ್ಟು 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.
ಸಾವಿನ ತನಿಖೆಗೆ ಸಮಿತಿ ರಚನೆ: ಘಟನೆ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಟದ ಮೈದಾನದ ಸಮಸ್ಯೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುತ್ತಿದ್ದು, ಒಂದು ವಾರದೊಳಗೆ ವರದಿಯನ್ನು ಸಲ್ಲಿಸಲು ಕೇಳಲಾಗುವುದು ಎಂದರು.
ಸಮಿತಿಯಲ್ಲಿ ಮುಖ್ಯ ಅಭಿಯಂತರರು ಹಾಗೂ ಪಶ್ಚಿಮ ವಲಯದ ಅಧಿಕಾರಿಗಳೂ ಇರಲಿದ್ದು, ವರದಿ ಆಧರಿಸಿ ವಾರ್ಡ್ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಗುತ್ತಿಗೆದಾರರು ಅಥವಾ ಏಜೆನ್ಸಿಗಳು ಆಟದ ಮೈದಾನಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೃತ ಬಾಲಕನ ಕುಟುಂಬಕ್ಕೆ ಪರಿಹಾರದ ಕುರಿತು ಕೇಳಿದಾಗ, ಪರಿಹಾರದ ನಿರ್ಧಾರವನ್ನು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಿರ್ಧಾರಕ್ಕೆ ಬಿಡಲಾಗಿದೆ ಎಂದರು.
ಘಟನೆಯ ನಂತರ, ಬಿಬಿಎಂಪಿಯು ವಲಯದಾದ್ಯಂತ ಎಚ್ಚರಿಕೆ ವಹಿಸಿದೆ. ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಹಳೆಯ ಮತ್ತು ಹಾನಿಗೊಳಗಾದ ಕಬ್ಬಿಣದ ಗೇಟ್‌ಗಳನ್ನು ತೆಗೆದುಹಾಕಲು, ಮುರಿದ ಬೇಲಿಯನ್ನು ಸರಿಪಡಿಸಲು, ತೂಗಾಡುತ್ತಿರುವ ಅಪಾಯಕಾರಿ ಕೇಬಲ್‌ಗಳು ಯಾವುದಾದರೂ ಇದ್ದರೆ ತೆಗೆದುಹಾಕಿ ಭದ್ರತೆಯನ್ನು ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
ಇತ್ತೀಚೆಗಷ್ಟೇ ಧಾರ್ಮಿಕ ಧ್ವಜ ಕಟ್ಟುವಾಗ ಮೊದಲ ಮಹಡಿಯಿಂದ ಬಿದ್ದು 16 ವರ್ಷದ ಬಾಲಕ ಮೃತಪಟ್ಟಿದ್ದ. ಬಿದ್ದ ರಭಸಕ್ಕೆ ತಲೆ ಮತ್ತು ಕುತ್ತಿಗೆಗೆ ಗಾಯಗಳಾಗಿದ್ದವು. ಚರಂಡಿಗೆ ಸ್ಲ್ಯಾಬ್ ಹಾಕಿ ಮುಚ್ಚಿಲ್ಲ ಎಂದು ಸಂಬಂಧಿಕರು ಹಾಗೂ ಕಾರ್ಯಕರ್ತರು ಬಿಬಿಎಂಪಿಯನ್ನು ದೂರಿದ್ದರು. ಆದರೆ, ಗೋವಿಂದಪುರದಲ್ಲಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಚರಂಡಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದು, ಅಪಘಾತ ಮತ್ತು ಸಾವಿಗೆ ಪಾಲಿಕೆ ಹೊಣೆಯಲ್ಲ ಎಂದು ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


