ರಾಜ್ಯ

Muda ಪ್ರಕರಣ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ: ಗೃಹ ಸಚಿವ ಪರಮೇಶ್ವರ್

ರಾಜ್ಯ ಸರ್ಕಾರವು ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ತಕ್ಕಂತೆ ಸಚಿವರು ತಮ್ಮ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಾಗಲಿ, ಸಚಿವರಾಗಲಿ ಸುಮ್ಮನೆ ಕುಳಿತಿಲ್ಲ.

Muda ಪ್ರಕರಣ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ: ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಜಿ ಪರಮೇಶ್ವರ್ — PTI
Published On :

ಬೆಂಗಳೂರು: ಮುಡಾ ಪ್ರಕರಣದಿಂದ ರಾಜ್ಯಸರ್ಕಾರದ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲಾ ಸಚಿವರೂ ಆಯಾ ಇಲಾಖೆಗಳ ಕಾರ್ಯಕಲಾಪಗಳನ್ನು ನಿರ್ವಹಣೆ ಮಾಡುತ್ತಿದ್ದಾರೆಂದು ಗೃಹ ಸಚಿವ ಪರಮೇಶ್ವರ್ ಅವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ತಕ್ಕಂತೆ ಸಚಿವರು ತಮ್ಮ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಾಗಲಿ, ಸಚಿವರಾಗಲಿ ಸುಮ್ಮನೆ ಕುಳಿತಿಲ್ಲ, ಈ ಪ್ರಕರಣ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂದು ಹೇಳಿದರು.

ಮುಖ್ಯ ಕಾರ್ಯದರ್ಶಿಯವರು ತಮ ಪಾಲಿನ ಜವಾಬ್ದಾರಿಯನ್ನ ನಿಭಾಯಿಸುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಇರುವುದರಿಂದ ಮುಖ್ಯಮಂತ್ರಿಯವರು ತಮ ಕಲಾಪಗಳನ್ನು ನಿಲ್ಲಿಸಿರಬಹುದು. ಉಳಿದಂತೆ ಎಲ್ಲಾ ಆಡಳಿತ ವ್ಯವಸ್ಥೆ ಮುಂದುವರೆದಿದೆ ಎಂದು ತಿಳಿಸಿದರು.

ನಾಯಕತ್ವ ಬದಲಾವಣೆ ವಿಚಾರ ಕುರಿತು ಮಾತನಾಡಿ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಹಂತದಲ್ಲಿರುವುದು ನಿಜ. ಅಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಎಲ್ಲದಕ್ಕೂ ಮೊದಲೇ ಮುಂದಿನ ಮುಖ್ಯಮಂತ್ರಿ ಕುರಿತು ಚರ್ಚೆ ಮಾಡುವ ಅಗತ್ಯ ಸದ್ಯಕ್ಕಂತೂ ನನಗೆ ಕಾಣಿಸುತ್ತಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರು ನೀಡಿರುವ ಅಭಿಯೋಜನೆಗೆ ಪೂರ್ವಾನುಮತಿಗೆ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಅದರ ವಾದ ಇಂದು ಮುಂದುವರೆಯಲಿದೆ. ಅಡ್ವೊಕೇಟ್‌ ಜನರಲ್‌ ಹಾಗೂ ಇತರ ವಕೀಲರು ತಮ ವಾದವನ್ನು ಮುಂದುವರೆಸಲಿದ್ದಾರೆ. ಇತ್ತೀಚಿನ ವಿಚಾರಣೆಯಲ್ಲಿ ನ್ಯಾಯಾಧೀಶರು 12ನೇ ತಾರೀಕಿನೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದ್ದಾರೆ.

ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಅವರು ಅವರ ಪಕ್ಷದಲ್ಲಿರುವ ಭಿನ್ನಮತಗಳನ್ನು ಮೊದಲು ನೋಡಿಕೊಳ್ಳಲಿ, ನಮ ಪಕ್ಷದ ವಿಚಾರವಾಗಿ ಅವರೇಕೆ ತಲೆ ಕೆಡಿಸಿಕೊಳ್ಳುತ್ತಾರೆ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇತ್ತೀಚೆಗೆ ಎತ್ತಿನಹೊಳೆ ಯೋಜನೆ ಉದ್ಘಾಟನೆಯ ದಿನ ನಾನು ಮತ್ತು ಸಚಿವ ಎಂ.ಬಿ.ಪಾಟೀಲ್‌ ಹಾಸನಕ್ಕೆ ಭೇಟಿ ನೀಡಬೇಕಿತ್ತು. ಇಬ್ಬರೂ ಜೊತೆಯಲ್ಲಿ ತೆರಳುವ ಕುರಿತು ಮಾತನಾಡಿಕೊಂಡಿದ್ದೆವು. ನಮ ಮನೆಗೆ ಉಪಹಾರಕ್ಕೆ ಬನ್ನಿ ಎಂದು ಎಂ.ಬಿ.ಪಾಟೀಲ್‌ ಆಹ್ವಾನ ನೀಡಿದ್ದರು. ಹೀಗಾಗಿ ನಾನು, ಅವರು ತಿಂಡಿ ತಿಂದು ಮುಖ್ಯಮಂತ್ರಿಯವರು ಮನೆಬಿಟ್ಟ ತಕ್ಷಣವೇ ನಾವೂ ಜೊತೆಯಲ್ಲಿಯೇ ಹೋಗಿದ್ದೇವೆ. ಅದರಲ್ಲಿ ರಾಜಕೀಯ ವಿಚಾರಗಳೇನೂ ಇಲ್ಲ. ಅನಗತ್ಯವಾಗಿ ಇಂತಹುದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕುಟುಂಬ ಸಮೇತರಾಗಿ ಅಮೆರಿಕಾಕ್ಕೆ ಖಾಸಗಿ ಪ್ರವಾಸ ತೆರಳಿದ್ದಾರೆ. ಅದು ಸರ್ಕಾರದಿಂದ ಪ್ರಾಯೋಜಿತವಾದ ಪ್ರವಾಸವಲ್ಲ. ಅವರ ಪ್ರವಾಸದ ಬಗ್ಗೆ ಕಾಂಗ್ರೆಸ್‌‍ ಸಭೆಯಲ್ಲೂ ಮಾಹಿತಿ ನೀಡಿದ್ದರು ಎಂದು ಹೇಳಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.