CM-DCM ಹೆಸರು ಹೇಳುವಂತೆ ಕಿರುಕುಳ: ಜೈಲಿಂದ ಹೊರ ಬರುತ್ತಿದ್ದಂತೆ ಇಡಿ ವಿರುದ್ಧ ಮಾಜಿ ಸಚಿವ ನಾಗೇಂದ್ರ ಆರೋಪ
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ನಾಗೇಂದ್ರ ಅವರು ಪರಪ್ಪನ ಅಗ್ರಹಾರ ಜೈಲಿಂದ ಬುಧವಾರ ಬಿಡುಗಡೆಯಾಗಿದ್ದಾರೆ.
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ನಾಗೇಂದ್ರ ಅವರಿಗೆ ನ್ಯಾಯಾಲಯದಿಂದ ಸೋಮವಾರ ಜಾಮೀನು ದೊರೆತಿತ್ತು. ನ್ಯಾಯಾಲಯದ ಜಾಮೀನಿನ ಆದೇಶ ಪ್ರತಿ ನಿನ್ನೆ ಜೈಲಿಗೆ ತಲುಪದ ಕಾರಣ ಇಂದು ನಾಗೇಂದ್ರ ಅವರನ್ನು ಜೈಲಿನ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಈ ನಡುವೆ ನೆಚ್ಚಿನ ನಾಯಕ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರು ಸಂಭ್ರಮಿಸಿದರು. ನಾಯಕನನ್ನು ಮೇಲೆತ್ತಿ ಕಾಣಿದಾಡಿದ್ದು, ಹೂವಿನ ಹಾರ ಹಾಕಿ, ಬೂದಗುಂಬಳ ಹೊಡೆದು ಸಂಭ್ರಮಾಚರಿಸಿದರು.
ಜೈಲಿನಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ ಅವರು, ವಾಲ್ಮೀಕಿ ನಿಗಮ ಹಗರಣದಲ್ಲಿ ನನ್ನಿಂದ ಯಾವುದೇ ತಪ್ಪು ನಡೆದಿಲ್ಲ, ಆದರೂ ನನ್ನನ್ನು ಬಂಧಿಸಿ ಇಡಿ ಅಧಿಕಾರಿಗಳು 3 ತಿಂಗಳ ಕಾಲ ಕಿರುಕುಳ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಹೆಸರು ಹೇಳುವಂತೆ ಕಿರುಕುಳ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಒತ್ತಡದಿಂದ ಹೀಗೆ ಮಾಡಿದ್ದಾರೆಂದು ಆರೋಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ಎಸ್ಐಟಿ ನನ್ನ ಪಾತ್ರ ಇಲ್ಲ ಎಂದು ಹೇಳಿದ್ದರೂ ಕೇಂದ್ರ, ಬಿಜೆಪಿಯಿಂದ ಷಡ್ಯಂತ್ರ ರೂಪಿಸಿದೆ. ಇದು ಬ್ಯಾಂಕ್ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಆಗಿರುವ ಹಗರಣ. ವಿನಾಕಾರಣ ನಮ್ಮ ಸರ್ಕಾರವನ್ನು ಸಿಲುಕಿಸುವ ಕೆಲಸ ಮಾಡಲಾಗಿದೆ. ಕೇಂದ್ರ ಹಾಗೂ ಬಿಜೆಪಿಯಿಂದ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಕೇಂದ್ರದ ಯಾವುದೇ ಬೆದರಿಕೆಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ ಎಂದು ಹೇಳಿದರು.
ಹಣ ವರ್ಗಾವಣೆ ಮಾಡಲು ನನ್ನಿಂದ ಯಾವುದೇ ಶಿಫಾರಸು ಆಗಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಈ ರೀತಿ ಮಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ, ಈಗ ಹೊರ ಬಂದಿದ್ದೇನೆ. ಎಸ್ಐಟಿ ಅಧಿಕಾರಿಗಳು ಕೂಡ ಯಾವ ಇಡಿ, ಸಿಬಿಐಗೆ ಕಡಿಮೆ ಇಲ್ಲ. ಇಡಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
3 ಕ್ಷೇತ್ರಗಳ ಉಪಚುನಾವಣೆ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿಯನ್ನು ಕಿತ್ತೊಗೆದಿದ್ದೇವೆ. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಬಿಜೆಪಿಯನ್ನ ಸೋಲಿಸುತ್ತೇವೆ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ಬಳ್ಳಾರಿ ಜಿಲ್ಲೆಯಿಂದಲೂ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



