ಮುಡಾ ಬೆನ್ನಲ್ಲೇ ಸಿಎಂಗೆ ಮತ್ತೊಂದು ಶಾಕ್: ಅರ್ಕಾವತಿ ಲೇಔಟ್ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಆರೋಪ, ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು
ನಿವೇಶನದ ಮಾಲೀಕರಾದ ಎಂ.ಎಸ್.ಶಿವಲಿಂಗಪ್ಪ, ಎಂ.ಚಂದ್ರಶೇಖರನ್, ಕೆ.ರಾಮಚಂದ್ರಯ್ಯ ಮತ್ತು ಡಾ.ವೆಂಕಟಕೃಷ್ಣಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಬೆಂಗಳೂರು: ಮುಡಾ ಹಗರಣ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿವೇಶನದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ನಿವೇಶನದ ಮಾಲೀಕರಾದ ಎಂ.ಎಸ್.ಶಿವಲಿಂಗಪ್ಪ, ಎಂ.ಚಂದ್ರಶೇಖರನ್, ಕೆ.ರಾಮಚಂದ್ರಯ್ಯ ಮತ್ತು ಡಾ.ವೆಂಕಟಕೃಷ್ಣಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಪತ್ರದಲ್ಲಿ, ಥಣಿಸಂದ್ರ, ಸಂಪಿಗೆಹಳ್ಳಿ, ಜಕ್ಕೂರು ಕೆ.ನಾರಾಯಣಪುರ ಹಾಗೂ 16 ಹಳ್ಳಿಗಳೂ ಸೇರಿ ಸುಮಾರು 800 ಎಕರೆ ಪ್ರದೇಶದಲ್ಲಿ ಬಿಡಿಎಯಿಂದ ಅರ್ಕಾವತಿ ಬಡಾವಣೆ ನಿರ್ಮಾಣವಾಗಿತ್ತು. 2004ರಲ್ಲಿ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಿದ್ದ ಬಿಡಿಎಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 20 ಸಾವಿರ ಫಲಾನುಭವಿಗಳನ್ನು ಪರಿಗಣಿಸಲಾಗಿತ್ತು. 12 ಸಾವಿರ ನಿವೇಶನದಾರರಿಗೆ ಬಿಡಿಎ ನಿವೇಶನ ನೋಂದಣಿ ಹಾಗೂ ಕ್ರಯಪತ್ರ ಮಾಡಿಕೊಡಲಾಗಿತ್ತು.
2006ರಲ್ಲಿ ನೂರಾರು ಮಂದಿಗೆ ಬಿಡಿಎಯಿಂದ ನಿವೇಶನ ಹಂಚಿಕೆಯಾಗಿತ್ತು. 30/40 ನಿವೇಶನಕ್ಕೆ ಎರಡೂವರೆ ಲಕ್ಷ, 40/60 ನಿವೇಶನಕ್ಕೆ ನಾಲ್ಕೂವರೆ ಲಕ್ಷ ಹಣ ಪಡೆದು ಹಂಚಿಕೆ ಮಾಡಿತ್ತು. ನೋಂದಣಿ ಪತ್ರ ಹಾಗೂ ಕ್ರಯಪತ್ರ ಪಡೆದ ನಿವೇಶನದಾರರು ಕನಿಷ್ಠ ಹತ್ತು ವರ್ಷ ನಿವೇಶನ ಮಾರಾಟ ಮಾಡುವಂತಿರರಲ್ಲ. 2014ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಅರ್ಕಾವತಿ ಲೇಔಟ್ನಲ್ಲಿ ನೀಡಲಾಗಿದ್ದ ನಿವೇಶನ ಹಿಂಪಡೆದಿತ್ತು ಎಂದು ದೂರುದಾರರು ಆಕ್ಷೇಪಿಸಿದ್ದಾರೆ.
2006ರಿಂದ ನಿವೇಶನ ಸಂಬಂಧ ತೆರಿಗೆ ಪಾವತಿಸಲಾಗಿದೆ. 2014ರಿಂದ ಇದುವರೆಗೂ ನಿವೇಶನದಾರರು ಹಂಚಿಕೆಯಾಗಿ ರಿಜಿಸ್ಟರ್ ಆಗಿದ್ದ ಸೈಟ್ ಹಿಂಪಡೆಯಲಾಗಿದೆ. ಅಲ್ಲದೆ, ಮಾಲೀಕರಿಂದ ವಶಪಡಿಸಿಕೊಂಡ ಜಾಗವನ್ನು ಅವರಿಗೂ ಹಿಂದಿರುಗಿಸಿಲ್ಲ. ಹಂಚಿಕೆ ಮಾಡಿ ನೋಂದಣಿ ಮಾಡಿದ ತಮ್ಮ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅರ್ಕಾವತಿಯಲ್ಲಿ ಸೈಟಿಲ್ಲ ಕೆಂಪೇಗೌಡ ಲೇಔಟ್ನಲ್ಲಿ ನೋಡೋಣ ಎಂದು ನಿರ್ಲಕ್ಷ್ಯದಿಂದ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಅರ್ಕಾವತಿ ಲೇಔಟ್ನಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿದ್ದು, ವಶಪಡಿಸಿಕೊಂಡಿರುವ ಜಾಗ ಭೂಗಳ್ಳರ ಪಾಲಾಗುತ್ತಿದೆ. ಇದರಿಂದ ಅಸಲಿ ಫಲಾನುಭವಿಗಳಾಗಿರುವ ನಿವೇಶನದಾರರಿಗೆ ತೊಂದರೆಯಾಗಿದೆ ಎಂದು ದೂರುದಾರರು ಹೇಳಿದ್ದಾರೆ.
ಕೆಲ ಭೂ ಮಾಲೀಕರು ತಮ್ಮ ಜಮೀನು ಸ್ವಾಧೀನಪಡಿಸಿಕೊಳ್ಳುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯವು ಭೂಸ್ವಾಧೀನ ಆದೇಶವನ್ನು ಎತ್ತಿಹಿಡಿದಿತ್ತು. ಆದರೆ, ಕೆಲವು ನಿಯತಾಂಕಗಳನ್ನು ಅನುಸರಿಸಿ ಭೂ ಮಾಲೀಕರ ಅರ್ಜಿಗಳನ್ನು ಪರಿಗಣಿಸಲು ಬಿಡಿಎಗೆ ನಿರ್ದೇಶನ ನೀಡಿತ್ತು. ನಂತರ ನೊಂದ ಕೆಲ ಭೂ ಮಾಲೀಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು, ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು.
ಆದರೆ, ನ್ಯಾಯಾಲಯದ ಆದೇಶಗಳನ್ನು ತಪ್ಪಾಗಿ ಅರ್ಥೈಸಿದ ಸರ್ಕಾರ, ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆಸಿದೆ. ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಲು ಸಿದ್ದರಾಮಯ್ಯ ಅವರು ‘ರೀ ಡು’ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಇದರ ಆಧಾರದ ಮೇಲೆ ಬಡಾವಣೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡ ಹಲವು ಜಮೀನುಗಳನ್ನು ಹಂಚಿಕೆ ಮಾಡಿದ್ದಾರೆ. ಕೆಲ ಮಧ್ಯವರ್ತಿಗಳು, ಬಿಡಿಎ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿ ಲಾಭ ಮಾಡಿದ್ದಾರೆ.
ಅರ್ಕಾವತಿ ಬಡಾವಣೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಅವರ ನೇತೃತ್ವದಲ್ಲಿ ಸರ್ಕಾರ ಆಯೋಗ ರಚಿಸಿದ್ದರೂ, ಆರೋಪಿಗಳನ್ನು ರಕ್ಷಿಸಲು ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಸಿಎಂ ಸೇರಿ ಬಿಡಿಎ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಅಕ್ರಮ ಎಸಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



