ಮುನಿರತ್ನಗೆ ನ್ಯಾಯಾಂಗ ಬಂಧನ; ಜಾರಕಿಹೊಳಿ -ಖರ್ಗೆ ಭೇಟಿ ಬಗ್ಗೆ ಅನಗತ್ಯ ಊಹಾಪೋಹ- ಸಿಎಂ; ರಾಜ್ಯ ಬಿಜೆಪಿ ಘಟಕದ ವಿರುದ್ಧ ಟಬು ರಾವ್ ದೂರು; ಇವು ಇಂದಿನ ಪ್ರಮುಖ ಸುದ್ದಿಗಳು 05-10-2024

1. ವಿರೋಧ ಪಕ್ಷಗಳ ಸುಳ್ಳು ಆರೋಪಗಳನ್ನು ಆಧರಿಸಿ ರಾಜೀನಾಮೆ ನೀಡುವುದಿಲ್ಲ- ಸಿದ್ದರಾಮಯ್ಯ
ವಿರೋಧ ಪಕ್ಷಗಳ ಸುಳ್ಳು ಆರೋಪಗಳನ್ನು ಆಧರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿರೋಧ ಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ. ರಾಜಕೀಯ ಕಾರಣಕ್ಕೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನಾನು ಏಕೆ ರಾಜೀನಾಮೆ ನೀಡಬೇಕು? ಸುಳ್ಳು ಆರೋಪಗಳಿಗೆ ಉತ್ತರ ನೀಡುತ್ತೇವೆ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ. ದಲಿತ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜನರು ಅನಗತ್ಯವಾಗಿ ಊಹಾಪೋಹ ಸೃಷ್ಟಿಸುತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಇದರಲ್ಲಿ ಊಹಾಪೋಹ ಸೃಷ್ಟಿಸುವ ಅಗತ್ಯ ಏನಿದೆ. ಹಿಂದೆಯೂ ಇಂತಹ ಸಭೆಗಳು ನಡೆದಿವೆ ಮತ್ತು ಮುಂದೆಯೂ ನಡೆಯುತ್ತವೆ ಎಂದು ಹೇಳಿದರು.
2. ಜಾತಿ ಗಣತಿ ವರದಿಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ: ಸಿಎಂ
ಜಾತಿಗಣತಿ ವರದಿ ಹಾಗೂ ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಜಾತಿ ಗಣತಿ ವರದಿಯನ್ನು ಸರ್ಕಾರ ಈಗಾಗಲೇ ಸ್ವೀಕರಿಸಿದೆ. ವರದಿಯಲ್ಲಿ ಸಣ್ಣಪುಟ್ಟ ದೋಷಗಳಿದ್ದರೆ ಅದನ್ನು ಸರಿಪಡಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ, ವರದಿಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೆವೆ ಬಳಿಕ ಅನುಷ್ಠಾನದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
3. ಮುನಿರತ್ನಗೆ ಕೋರ್ಟ್ ನ್ಯಾಯಾಂಗ ಬಂಧನ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಎಸ್ಐಟಿ ಕಸ್ಟಡಿ ಅಂತ್ಯವಾದ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಆದೇಶ ಪ್ರಕಟಿಸಿದೆ. ಆರೋಪಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಹಾಜರು ಪಡಿಸಿದ್ದ ಎಸ್ಐಟಿ ಮುನಿರತ್ನ ಅವರನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಮತ್ತೊಂದೆಡೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಅಕ್ಟೋಬರ್ 8ಕ್ಕೆ ಮುಂದೂಡಿದೆ.
4. ರಾಜ್ಯ ಬಿಜೆಪಿ ಘಟಕದ ವಿರುದ್ಧ ಟಬು ರಾವ್ ದೂರು
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಆರೋಪಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಬಿಜೆಪಿ ರಾಜ್ಯ ಘಟಕದ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ನಾನು ಪಾಲ್ಗೊಳ್ಳದೇ ಇದ್ದರೂ ನನ್ನ ವಿರುದ್ಧ ನಿರಂತರವಾಗಿ ಅವಹೇಳನಕಾರಿ ಮತ್ತು ಕೋಮುವಾದಿ ಟೀಕೆಗಳು ಬರುತ್ತಿವೆ. ಆದ್ದರಿಂದ ಮಹಿಳಾ ಆಯೋಗಕ್ಕೆ ನಾನು ದೂರು ನೀಡಿದ್ದೇನೆ ಮಹಿಳೆಯರು ಗೌರವಕ್ಕೆ ಅರ್ಹರು, ನಿಂದನೆಗೆ ಅಲ್ಲ”ಎಂದು ತಬಸ್ಸುಮ್ ರಾವ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಈಗಾಗಲೇ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಅವರು ಉಲ್ಲೇಖಿಸಿದ್ದಾರೆ. ಮೊನ್ನೆಯಷ್ಟೇ ಸಾವರ್ಕರ್ ಕುರಿತ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಟೀಕಿಸುವ ಭರದಲ್ಲಿ ಬಿಜೆಪಿ, ಸಚಿವರ ಪತ್ನಿ ಟಬು ರಾವ್ ಅವರ ಹೆಸರನ್ನ ಪ್ರಸ್ತಾಪಿಸಿತ್ತು.
5. ಪಾಕ್ ಪ್ರಜೆಗಳಿಗೆ ಪಾಸ್ಪೋರ್ಟ್: ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ- ಗೃಹ ಸಚಿವ ಪರಮೇಶ್ವರ್
ಪಾಕಿಸ್ತಾನ ಪ್ರಜೆ ಸೇರಿದಂತೆ ವಿದೇಶಿಗರು ಬೆಂಗಳೂರಿಗೆ ಬಂದು ಪಾಸ್ಪೋರ್ಟ್ ಮಾಡಿಕೊಳ್ಳುತ್ತಾರೆ ಎಂದರೆ ಅದು ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಗೃಹ ಸಚಿವ ಜಿ ಪರಮೇಶ್ವರ್ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪ್ರಜೆ ಬೆಂಗಳೂರಿನಲ್ಲಿ ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ, ಉಳಿದವರನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದ್ದಾರೆ.
6. ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ- ಜೆಡಿಎಸ್ ನಾಯಕ ಎಚ್‌ಎಂ ರಮೇಶ್ ಗೌಡ
ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಮಾಜಿ ಎಂಎಲ್‌ಸಿ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್‌ಎಂ ರಮೇಶ್ ಗೌಡ ಆರೋಪಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆ ಖರ್ಚಿಗಾಗಿ 50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಉದ್ಯಮಿ ವಿಜಯ್ ತಾತಾ ಕೊಟ್ಟಿರುವ ದೂರಿಗೆ ವಿರುದ್ಧವಾಗಿ ರಮೇಶ್ ಗೌಡ ಪ್ರತಿ ದೂರು ದಾಖಲಿಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯ್ ತಾತಾನಿಂದ ಅನೇಕರಿಗೆ ಮೋಸವಾಗಿದ್ದು, ಮೋಸ ಹೋದವರಿಗೆ ನ್ಯಾಯ ಕೊಡಿಸಲು ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


