ಮನೆ ಭಾಷೆ ಯಾವುದೇ ಆದರೂ ವ್ಯವಹಾರಿಕ ಭಾಷೆ ಕನ್ನಡವಾಗಿರಲಿ: ಸಿಎಂ ಸಿದ್ದರಾಮಯ್ಯ
'ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ. ಎಲ್ಲ ಭಾಷೆಗಳ ಬಗ್ಗೆ ಗೌರವ ಇರಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಿರಿ. ಆದರೆ ಈ ನೆಲದ ಭಾಷೆ ಕನ್ನಡವನ್ನು ಬಿಟ್ಟು ಕೊಡುವಷ್ಟು ಧಾರಾಳತನ ಬೇಡ.

ರಾಯಚೂರು: ನೀವು ಮನೆಯಲ್ಲಿ ಯಾವುದೇ ಭಾಷೆ ಬಳಕೆ ಮಾಡಿ.. ಆದರೆ ನಿಮ್ಮ ವ್ಯವಹಾರಿದ ಭಾಷೆ ಕನ್ನಡವಾಗಿರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸಂಭ್ರಮ 50ರ ಅಂಗವಾಗಿ ಆಯೋಜಿಸಿದ್ದ ‘ಗೋಕಾಕ್ ಚಳವಳಿ: ಹಿನ್ನೋಟ-ಮುನ್ನೋಟ’ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ ಎಂದರು.
ಎಲ್ಲ ಭಾಷೆಗಳ ಬಗ್ಗೆ ಗೌರವ ಇರಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಿರಿ. ಆದರೆ ಈ ನೆಲದ ಭಾಷೆ ಕನ್ನಡವನ್ನು ಬಿಟ್ಟು ಕೊಡುವಷ್ಟು ಧಾರಾಳತನ ಬೇಡ. ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ.
ಕನ್ನಡ ಅಗ್ರ ಭಾಷೆಯಾಗಲಿ, ಕನ್ನಡ ಮೊದಲ ಭಾಷೆಯಾಗಲಿ. ಗೋಕಾಕ್ ಚಳವಳಿಯ ಪರಿಣಾಮ ರಾಜ್ಯದಲ್ಲಿ ಕನ್ನಡದ ವಾತಾವರಣ ವಿಸ್ತರಿಸಲು ಕನ್ನಡ ಕಾವಲು ಸಮಿತಿಯನ್ನು ರಚಿಸಲಾಯಿತು. ಬಳಿಕ ಇದೇ ಸಮಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯಿತು ಎಂದು ಅವರು ಹೇಳಿದರು.
ಆಡಳಿತ ಭಾಷೆ ಕನ್ನಡ ಆಗಿರಲಿ
ಪ್ರತಿಯೊಂದು ಭಾಷೆಯನ್ನೂ ಕಲಿಯಿರಿ, ಆದರೆ ಆಡಳಿತ ಭಾಷೆ ಕನ್ನಡ ಆಗಿರಲಿ. ಕನ್ನಡ ಭಾಷಾ ಹೋರಾಟಗಳಲ್ಲಿ ಅತ್ಯಂತ ಪ್ರಮುಖ ಹೋರಾಟವಾದ ಗೋಕಾಕ್ ಚಳವಳಿಯ ವ್ಯಾಪಕತೆ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಪರಿಗಣಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ಈ ಚಳವಳಿಯನ್ನು ಗೋಕಾಕ್ ಚಳವಳಿ ಎಂದು ಹೆಸರಿಸಿ ಸೀಮಿತವಾಗಿಸುವ ಬದಲು ಕನ್ನಡ ಭಾಷಾ ಚಳವಳಿ ಎಂದು ಮರುನಾಮಕರಣ ಮಾಡಬೇಕಾದ ಅವಶ್ಯಕತೆ ಇದೆ.
ಗೋಕಾಕ್ ಚಳವಳಿಯಲ್ಲಿ ತಾವು ಸಹ ಪರೋಕ್ಷವಾಗಿ ಭಾಗವಹಿಸಿದ್ದು, ಎಂದೆಂದಿಗೂ ತಮ್ಮ ಮನಸ್ಸು ಕನ್ನಡಕ್ಕಾಗಿ ಮಿಡಿದಿದೆ. ಏಕೀಕರಣದ ನಂತರ 1973ರ ನ.1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅಂದಿನ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಿ 50 ವರ್ಷಗಳು ಸಂದಿವೆ ಎಂದು ಹೇಳಿದರು.
ಇಂತಹ ಅಧುನಿಕ ಕಾಲಘಟ್ಟದಲ್ಲಿ ಕನ್ನಡದ ಸ್ಥಿತಿಗತಿಗಳನ್ನು ಚರ್ಚಿಸಿ ಮುಂದೆ ಯಾವ ರೀತಿಯ ಭಾಷಾ ಪರವಾದ ನಿಲುವುಗಳನ್ನು ತಳೆಯಬಹುದೆನ್ನುವ ಕುರಿತು ಆಲೋಚಿಸಲು ರಾಜ್ಯ ಸರ್ಕಾರವು ಇಂತಹ ಮಹತ್ವದ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಚರ್ಚೆಗಳನ್ನು ನೀತಿ ನಿರೂಪಣೆಗೆ ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಇಂಗ್ಲಿಷ್ ಟೈಪ್ ರೈಟರ್ ಗಳನ್ನು ಕಿತ್ತುಕೊಂಡಿದ್ದೆ
1983ರಲ್ಲಿ ನಾನು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸೂಚನೆಯಂತೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸರ್ಕಾರಿ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಆಂಗ್ಲ ಭಾಷೆಗೆ ಒಗ್ಗಿಕೊಂಡಿತ್ತು. ಹಲವಾರು ಕಚೇರಿಗಳಿಗೆ ಭೇಟಿ ನೀಡಿ ಸಿಬ್ಬಂದಿ ಬಳಸುತ್ತಿದ್ದ ಇಂಗ್ಲಿಷ್ ಟೈಪ್ ರೈಟರ್‌ಗಳನ್ನು ಕಿತ್ತುಕೊಂಡು ಕನ್ನಡ ಟೈಪ್ ರೈಟರ್ ಗಳನ್ನು ಒದಗಿಸುವ ಕೆಲಸವನ್ನು ಮಾಡಿದ್ದೆ.
ಇಂದು ಕನ್ನಡದ ಸವಾಲುಗಳು ವ್ಯಾಪಕವಾಗಿವೆ. ಬಹಳ ಮುಖ್ಯವಾಗಿ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆಯನ್ನು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ. ಯಾವುದೇ ಮಾಧ್ಯಮದಲ್ಲಿಯೂ ಕನ್ನಡಕ್ಕೆ ಆಗ್ರ ಸ್ಥಾನವನ್ನು ಕಲ್ಪಿಸಬೇಕಾದ್ದು, ಸರಕಾರದ ಕರ್ತವ್ಯವಾಗಿದ್ದು, ಇದಕ್ಕೆ ನನ್ನ ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಕನ್ನಡದಲ್ಲೆ ಸಹಿ ಮಾಡುತ್ತೇನೆ
ಸರಕಾರದ ಯಾವುದೇ ಕಡತಗಳ ಟಿಪ್ಪಣಿಗಳಲ್ಲಿ ನಾನು ಯಾವಾಗಲೂ ಕನ್ನಡವನ್ನೇ ಬಳಸುತ್ತೇನೆ. ಪತ್ರಗಳ ಮೇಲೆ, ಟಿಪ್ಪಣಿಗಳ ಮೇಲೆ ನಾನು ಎಂದಿಗೂ ಕನ್ನಡ ಭಾಷೆಯಲ್ಲಿಯೇ ಸಹಿ ಮಾಡುತ್ತೇನೆ. ಕೇಂದ್ರ ಸರ್ಕಾರದ ಪತ್ರ, ಪ್ರಸ್ತಾವನೆಗಳಲ್ಲಿ ಆಂಗ್ಲ ಭಾಷೆಯನ್ನು ಬಳಸುತ್ತೇನೆಯೇ ಹೊರತು ಬೇರೆ ಸಂದರ್ಭಗಳಲ್ಲಿ ಕನ್ನಡಕ್ಕೆ ಆದ್ಯತೆಯನ್ನು ನೀಡುತ್ತೇನೆ. ಅಧಿಕಾರಿಗಳು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಕನ್ನಡ ಬಳಕೆಗೆ ಮುಂದಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕನ್ನಡದ ಹಿರಿಯ ಹೋರಾಟಗಾರರನ್ನು ಮತ್ತು ಗೋಕಾಕ್ ಆಂದೋಲನದ ಮುಖಂಡರನ್ನು ಸನ್ಮಾನಿಸಿದರು.
ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ
ಇದೇ ವೇಳೆ ವಿಧಾನಸೌಧದ ಆವರಣದಲ್ಲಿ ಇದೇ ನ.1 ರಂದು ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು. ಈ ಕಾರ್ಯವು ನಾಡಿನ ಜನರ ಕನ್ನಡಾಭಿಮಾನದ ಸಂಕೇತವಾಗಿ ಉಳಿಯಲಿದೆ. ಅನ್ಯರಾಜ್ಯಗಳ ಜನರಂತೆ ನಮಗೆ ಭಾಷೆಯ ಕುರಿತಾದ ದುರಾಭಿಮಾನದ ಅವಶ್ಯಕತೆ ಇಲ್ಲ. ಆದರೆ ಭಾಷಾಭಿಮಾನವನ್ನು ನಾವು ಹೊಂದದಿದ್ದಲ್ಲಿ ತಪ್ಪಾಗುತ್ತದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




