ಮೈಸೂರು: ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ ನೆಲಸಮ, ಮರುನಿರ್ಮಾಣ!
ರಾಜ್ಯ ಸರ್ಕಾರವು ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಮಹಾರಾಣಿ ಕಾಲೇಜು ಮತ್ತು ಹಾಸ್ಟೆಲ್ ಕಟ್ಟಡ ನೆಲಸಮ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮೈಸೂರು: ಪುರಾತತ್ವ ಇಲಾಖೆ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಹಾಗು ಪರಂಪರೆ ಸಮಿತಿಯು ಮೈಸೂರಿನ 129 ಪಾರಂಪರಿಕ ಕಟ್ಟಡ ರಚನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದು, 11 ಪಾರಂಪರಿಕ ಕಟ್ಟಡಗಳನ್ನು ತಕ್ಷಣ ಮರುಸ್ಥಾಪಿಸುವಂತೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಮಹಾರಾಣಿ ಕಾಲೇಜು ಮತ್ತು ಹಾಸ್ಟೆಲ್ ಕಟ್ಟಡ ನೆಲಸಮ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಕಟ್ಟಡಗಳ ಹೊಸ ರಚನೆಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಸಂಬಂದಪಟ್ಟಂತಹ ಇಲಾಖೆಗಳಿಗೆ ಸೂಚನೆ ನೀಡಿದೆ.
ಶಿಥಿಲಗೊಂಡಿರುವ ಪಾರಂಪರಿಕ ಕಟ್ಟಡಗಳ ಸಮೀಕ್ಷೆ ನಡೆಸಿದ ಪಾರಂಪರಿಕ ಸಮಿತಿಯು, ವಾಣಿ ವಿಲಾಸ ಮಾರುಕಟ್ಟೆ, ಅತ್ತಾರ ಕಚೇರಿ, ಅಗ್ನಿಶಾಮಕ ದಳದ ಕಟ್ಟಡ, ಮಹಾರಾಣಿ ವಿಜ್ಞಾನ ಕಾಲೇಜು, ಬಾಲಕಿಯರ ಸರ್ಕಾರಿ ಪ್ರಮಾಣೀಕೃತ ಶಾಲೆ, ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸಂಗೀತ ವಿಶ್ವವಿದ್ಯಾಲಯ, ಸರ್ಕಾರಿ ಬಾಲಕಿಯರ ಗೃಹ ಮತ್ತು ಮಹಾರಾಜ ಸಂಸ್ಕೃತ ಪಾಠಶಾಲೆ ಕಟ್ಟಡಗಳನ್ನು ತಕ್ಷಣ ಮರುಸ್ಥಾಪಿಸುವಂತೆ ಶಿಫಾರಸು ಮಾಡಿದ್ದು, ಈ ಕುರಿತ ವಿಸ್ತೃತ ವರದಿನ್ನು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರಿಗೆ ಸಲ್ಲಿಸಿದೆ.
ತಜ್ಞರ ಸಮಿತಿಯು ಈ 11 ರಚನೆಗಳ ಜೀರ್ಣೋದ್ಧಾರಕ್ಕೆ 96,80,59,838 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.
ಪಾರಂಪರಿಕ ಸಮಿತಿ ಸದಸ್ಯ ಹಾಗೂ ತಜ್ಞ ಪ್ರೊ.ರಂಗರಾಜು ಅವರು ಪಾರಂಪರಿಕ ಕಟ್ಟಡಗಳ ಸ್ಥಿತಿಗತಿಯ ವರದಿಯ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಂಡಿಮೊಹಲ್ಲಾದ ವಾಣಿ ವಿಲಾಸ ಮಾರುಕಟ್ಟೆ ಮತ್ತು ಚಿಕ್ಕ ಮಾರುಕಟ್ಟೆಯ ಸ್ಥಿತಿಗತಿ ಕುರಿತು ಪ್ರಶ್ನಿಸಿದರು.
ಇದೇ ವೇಳೆ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ, ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಹಾಸ್ಟೆಲ್ ಅನ್ನು ನೆಲಸಮಗೊಳಿಸಲು ಸರ್ಕಾರ ಬದ್ಧವಾಗಿದೆ ಮತ್ತು ಈ ಆರ್ಥಿಕ ವರ್ಷದಲ್ಲಿ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.
ಇದೇ ರೀತಿಯ ರಚನೆಯನ್ನು ಕಾಪಾಡಿಕೊಳ್ಳಲು ಮತ್ತು ಪಾರಂಪರಿಕ ನೋಟವನ್ನು ಉಳಿಸಿಕೊಳ್ಳಲು ಸರ್ಕಾರ ಬಯಸಿದೆ, ಆದರೆ, ವ್ಯಾಪಾರಸ್ಥರು ಮತ್ತು ಮಾರುಕಟ್ಟೆಗೆ ಭೇಟಿ ನೀಡುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಪರಿಗಣಿಸಿ ಹೊಸ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈಗಿರುವ ಕಟ್ಟಡಗಳನ್ನೇ ಮರುನಿರ್ಮಿಸಲು ಕೆಲವು ತಜ್ಞರು ಸಲಹೆ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಕಟ್ಟಡ ಕೆಡವಲು ಸರ್ಕಾರ ನಿರ್ಧರಿಸಿದೆ. ನಿರ್ಮಾಣ ಕಾರ್ಯವನ್ನು ಶೀಘ್ರಗತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಮುಂದಿನ ನಾಲ್ಕು ವರ್ಷಗಳಲ್ಲಿ ಅನೇಕ ಪಾರಂಪರಿಕ ಕಟ್ಟಡಗಳನ್ನು ಮರುಸ್ಥಾಪಿಸಲಾಗುವುದು, ಇವುಗಳಿಗೆ ಹಂತಹಂತವಾಗಿ ಹಣವನ್ನು ಮಂಜೂರು ಮಾಡಲಾಗುವುದು, ಯಾವುದೇ ಸರ್ಕಾರವು ಒಂದೇ ಬಾರಿಗೆ 100 ಕೋಟಿ ರೂ.ಗಳನ್ನು ಮೀಸಲಿಡುವುದು ಕಷ್ಟಕರವಾಗುತ್ತದೆ, ಸರ್ಕಾರಕ್ಕೂ ಹಲವಾರು ಆದ್ಯತೆಗಳಿವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



