ಇವಿಎಂಗೆ ಹಾನಿ: ಜೆಡಿಎಸ್ ಮುಖಂಡನ ವಿರುದ್ಧದ ಪ್ರಕರಣ ರದ್ದತಿ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ
ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ ಮಾಡಿದ್ದಕ್ಕಾಗಿ ಜೆಡಿಎಸ್ ಮುಖಂಡ ಬಿ ಬಿ ಪಾಟೀಲ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ದೂರು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಬೆಂಗಳೂರು: ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ ಮಾಡಿದ್ದಕ್ಕಾಗಿ ಜೆಡಿಎಸ್ ಮುಖಂಡ ಬಿ ಬಿ ಪಾಟೀಲ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ದೂರು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ರಾಜ್ಯ ಸರ್ಕಾರದ ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ನಡೆಸಿದ್ದು, ಜೆಡಿಎಸ್ ಮುಖಂಡ ಬಿ ಬಿ ಪಾಟೀಲ್ ಅವರಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.
ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠ ಜುಲೈ 2023ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಬಿ ಬಿ ಪಾಟೀಲ್ ವಿರುದ್ಧದ ದೂರನ್ನು ತಪ್ಪಾಗಿ ಹೈಕೋರ್ಟ್ ರದ್ದುಗೊಳಿಸಿದೆ ಎಂದು ವಿಚಾರಣೆ ವೇಳೆ ವಾದಿಸಲಾಗಿದೆ.
ಚುನಾವಣಾ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಿಂದನೆ ಮತ್ತು ಇವಿಎಂ ಯಂತ್ರಗಳನ್ನು ಹಾನಿ ಮಾಡಿದ ಗುಂಪಿನ ಭಾಗವಾಗಿದ್ದ ಪಾಟೀಲರ ವಿರುದ್ಧ ವೀಡಿಯೊ ಮತ್ತು ಛಾಯಾಚಿತ್ರಗಳ ರೂಪದಲ್ಲಿ ಬಹಳಷ್ಟು ಸಾಕ್ಷ್ಯಗಳನ್ನು ಒದಗಿಸಲಾಗಿತ್ತು ಎಂಬುದನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ದೂರಲಾಗಿದೆ.
ಚುನಾವಣಾಧಿಕಾರಿಗಳ ಮೇಲೆ ದಾಳಿ ಮಾಡಿ, ವಾಹನಗಳನ್ನು ಜಖಂಗೊಳಿಸಿ ಇವಿಎಂ ಸೇರಿದಂತೆ ಚುನಾವಣಾ ಸಾಮಗ್ರಿಗಳನ್ನು ಧ್ವಂಸಗೊಳಿಸಿದ ಗುಂಪಿನಲ್ಲಿ ಆರೋಪಿ ಪಾಟೀಲ್ ಸಕ್ರಿಯ ಪಾತ್ರ ವಹಿಸಿದ್ದರು ಎಂದು ಮನವಿ ತಿಳಿಸಿದೆ.
ಪ್ರತಿವಾದಿಯು ಕಾನೂನುಬಾಹಿರ ಸಭೆಯ ಭಾಗವಾಗಿ ಅದರ ನೇತೃತ್ವ ವಹಿಸಿದ್ದರು. ಜೊತೆಗೆ ಅವರು ಅಪರಾಧ ಎಸಗಿದ್ದರು ಎಂಬುದನ್ನು ಚಾರ್ಜ್ ಶೀಟ್ನ ಭಾಗವಾಗಿರುವ ವೀಡಿಯೊ ರೆಕಾರ್ಡಿಂಗ್ ಸೂಚಿಸುತ್ತದೆ ಎಂದು ತಿಳಿಸಲಾಗಿದೆ. ಇದಲ್ಲದೆ, ಆರೋಪಪಟ್ಟಿಯು ಹೈಕೋರ್ಟ್ನ ವಿಚಾರಣೆಯ ಭಾಗವಾಗಿ ಇರಲಿಲ್ಲ ಎಂದೂ ವಿವರಿಸಲಾಗಿದೆ. ಕರ್ನಾಟಕ ಸರ್ಕಾರದ ಪರವಾಗಿ ವಕೀಲ ಡಿ ಎಲ್ ಚಿದಾನಂದ ವಾದ ಮಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



