Hate Speech case: Tejasvi Surya ವಿರುದ್ಧ FIR ಗೆ ಹೈಕೋರ್ಟ್ ತಡೆ; ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಬೆಂಗಳೂರಿನ ನಗರ್ತಪೇಟೆಯ ಮೊಬೈಲ್ ಅಂಗಡಿ ಮಾಲೀಕ ಮುಖೇಶ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗ ತಂದ ಆರೋಪದಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿತ್ತು.
ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಲು ನಿರಾಕರಿಸಿದೆ.
ಅರ್ಜಿದಾರರು ಏಕೆ ಮೊದಲಿಗೆ ಹೈಕೋರ್ಟ್ ಕದತಟ್ಟಿಲ್ಲ ಎಂದು ಪೀಠ ಪ್ರಶ್ನಿಸಿದ್ದು, ''ಪ್ರತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಓಡಿ ಬರುತ್ತಾರೆ. ನಾವು ನೋಟಿಸ್ ಜಾರಿ ಮಾಡಿದರೆ ನಾವೇನಾದರೂ ನಿಲುವು ತೆಗೆದುಕೊಳ್ಳುತ್ತೇವೆಯೇ? ಅದು ಮಧ್ಯಂತರ ನಿಲುವಷ್ಟೇ ಅಗುತ್ತದೆ. ನೀವೇಕೆ ಹೈಕೋರ್ಟ್‌ಗೆ ಹೋಗಿಲ್ಲ” ಎಂದು ನ್ಯಾಯಾಲಯವು ಪ್ರಶ್ನಿಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಶಾದನ್ ಫರಾಸತ್ ಅವರು ಅರ್ಜಿ ಹಿಂಪಡೆಯುವುದಾಗಿ ಹೇಳಿದ್ದರಿಂದ ನ್ಯಾಯಾಲಯವು ಅದನ್ನು ಪುರಸ್ಕರಿಸಿತು. ಮಾರ್ಚ್ 22ರಂದು ಹೈಕೋರ್ಟ್ ಮಾಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಾಲಯ ನಡೆಸಿತು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ತೇಜಸ್ವಿ ಸೂರ್ಯ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿತ್ತು.
ಏನಿದು ಪ್ರಕರಣ?
ಆಜಾನ್ ಪ್ರಾರ್ಥನೆ ವೇಳೆ ಹನುಮಾನ್ ಚಾಲೀಸಾ ಹಾಡು ಹಾಕಿದರು ಎಂದು ಆರೋಪಿಸಿ ಕೆಲ ಯುವಕರು ಬೆಂಗಳೂರು ನಗರದ ನಗರತ್ ಪೇಟೆಯ ವ್ಯಾಪಾರಿ ಮುಕೇಶ್‌ನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಇದರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ತೇಜಸ್ವಿ ಸೂರ್ಯ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಿ ತೇಜಸ್ವಿ ಸೂರ್ಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ, 295ಎ ಹಾಗೂ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123(3ಎ) ಅಡಿ ಬೆಂಗಳೂರಿನ ಹಲಸೂರು ಗೇಟ್ ಠಾಣೆಯಲ್ಲಿ 20.03.2024ರಂದು ಪ್ರಕರಣ ದಾಖಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




