ರಾಜ್ಯ

ಮಂಗಳೂರು: ವಿದ್ಯುತ್ ಪ್ರವಹಿಸಿ ಇಬ್ಬರು ಸಾವು, ಭರ್ತಿಯಾಗಿ ಹರಿದ ಕುಮಾರಧಾರಾ ನದಿ, ಉಡುಪಿ, ಚಿಕ್ಕಮಗಳೂರಲ್ಲೂ ಮಳೆ

ಮೃತರು ಆಟೋ ಚಾಲಕರಾಗಿದ್ದು ರಾಜು(52) ಮತ್ತು ದೇವರಾಜು (42) ಎಂದು ಗುರುತಿಸಲಾಗಿದೆ. ಇಬ್ಬರೂ ಕೂಡ ಇಲ್ಲಿನ ಬಾಡಿಗೆ ರೂಂನಲ್ಲಿ ವಾಸವಾಗಿದ್ದರು.

ಮಂಗಳೂರು: ವಿದ್ಯುತ್ ಪ್ರವಹಿಸಿ ಇಬ್ಬರು ಸಾವು, ಭರ್ತಿಯಾಗಿ ಹರಿದ ಕುಮಾರಧಾರಾ ನದಿ, ಉಡುಪಿ, ಚಿಕ್ಕಮಗಳೂರಲ್ಲೂ ಮಳೆ
ಪುತ್ತೂರಿನಲ್ಲಿ ಮಳೆಗೆ ಗುಡ್ಡ ಕುಸಿದು ಬಿದ್ದು ಹಾನಿಯಾಗಿರುವುದು
Published On :

ಮಂಗಳೂರು: ಭಾರೀ ಮಳೆಗೆ ಕರಾವಳಿಯ ಉಳ್ಳಾಲ ಬಳಿ ಮನೆ ಕುಸಿದು ನಾಲ್ವರು ಮೃತಪಟ್ಟ ಬೆನ್ನಲ್ಲೇ ಭಾರೀ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯುತ್ ಪ್ರವಹಿಸಿ ಇಬ್ಬರು ಬಲಿಯಾದ ದಾರುಣ ಘಟನೆ ಮಂಗಳೂರಿನ ಪಾಂಡೇಶ್ವರ ರೊಸಾರಿಯೋ ಚರ್ಚ್ ಹಿಂಬದಿ ಗುರುವಾರ ಮುಂಜಾನೆ ನಡೆದಿದೆ.

ಮೃತರು ಆಟೋ ಚಾಲಕರಾಗಿದ್ದು ರಾಜು(52) ಮತ್ತು ದೇವರಾಜು (42) ಎಂದು ಗುರುತಿಸಲಾಗಿದೆ. ಇಬ್ಬರೂ ಕೂಡ ಇಲ್ಲಿನ ಬಾಡಿಗೆ ರೂಂನಲ್ಲಿ ವಾಸವಾಗಿದ್ದರು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಒಬ್ಬ ಆಟೋ ಚಾಲಕ ಆಟೋ ಸ್ವಚ್ಚ ಗೊಳಿಸಲು ರೂಂ ನಿಂದ ಹೊರಬಂದು ಆಟೋ ತೊಳೆಯುವ ವೇಳೆ ಮಳೆಗೆ ತುಂಡಾಗಿ ಬಿದ್ದಿದ್ದ ಬೀದಿ ದೀಪದ ವಿದ್ಯುತ್ ತಂತಿ ತಗುಲಿ ವಿದ್ಯುತ್ ಆಘಾತಕ್ಕೆ ಪ್ರಜ್ಞೆ ತಪ್ಪಿ ಬಿದ್ದರು.

ಇದನ್ನು ಕಂಡ ಮತ್ತೊರ್ವ ಚಾಲಕ ಗೋಣಿ ಚೀಲ ಹಿಡಿದು ಆತನ ರಕ್ಷಣೆಗೆ ಮುಂದಾಗಿದ್ದಾರೆ, ಈ ಸಂದರ್ಭ ಅವರೂ ವಿದ್ಯುತ್ ಅಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣ್ಣಿನಡಿ ಸಿಲುಕಿದ ಮಕ್ಕಳ ರಕ್ಷಣೆ: ಜಿಲ್ಲೆಯಾದ್ಯಂತ ಭಾರಿ ಮಳೆಗೆ ಅನೇಕ ಕಡೆ ಧರೆ ಕುಸಿದ ಘಟನೆ ನಡೆಯುತ್ತಿದ್ದು, ಪುತ್ತೂರು ಬನ್ನೂರಿನ ಜೈನರಗುರಿ ಸಮೀಪ ಮಜೀದ್ ಎಂಬುವವರ ಮನೆ ಮೇಲೆ ಧರೆ ಕುಸಿದ ಪರಿಣಾಮ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಇಂದು ನಸುಕಿನ ಜಾವ ನಡೆದಿದೆ.

ಬನ್ನೂರು ಜೈನರಗುರಿ ಮಜೀದ್ ಎಂಬವರ ಮನೆಯ ಪಕ್ಕದ ಧರೆಯೊಂದರ ಮಣ್ಣು ಮಳೆಗೆ ಸಡಿಲಗೊಂಡು ಮನೆ ಮೇಲೆ ಕುಸಿದು ಬಿದ್ದಿದೆ. ಮಜೀದ್ ಮತ್ತು ಮನೆ ಮಂದಿ ಮಕ್ಕಳು ಮಲಗಿದ್ದ ಕೊಠಡಿಯ ಮೇಲೆ ಮಣ್ಣು ಕುಸಿದ ಪರಿಣಾಮ ಮನೆಯ ಅರ್ಧ ಭಾಗ ಕುಸಿದಿತ್ತು. ಈ ವೇಳೆ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದರು. ತಕ್ಷಣ ಮನೆಯಲ್ಲಿದ್ದ ಉಳಿದವರು ಮಕ್ಕಳನ್ನು ಮಣ್ಣಿನಡಿಯಿಂದ ಹೊರ ಎಳೆದು ಅಪಾಯವನ್ನು ತಪ್ಪಿಸಿದ್ದಾರೆ.

ಘಟನಾ ಸ್ಥಳಕ್ಕೆ ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್, ಪೌರಾಯುಕ್ತ ಮಧು ಎಸ್ ಮನೋಹರ್ ಸಹಿತ ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಗರಸಭೆ ಮತ್ತು ಸ್ಥಳೀಯರು ಮಣ್ಣು ತೆರವು ಕಾರ್ಯ ಮಾಡಿದ್ದಾರೆ.

ಮುಳುಗಿದ ಕುಮಾರಧಾರ ಸ್ನಾನಘಟ್ಟ: ಭಾರಿ ಮಳೆಯಿಂದ ಕುಮಾರಧಾರ ಸ್ನಾನಘಟ್ಟ ಮುಳುಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಿದೆ. ಕುಮಾರಧಾರ ನದಿಗಿಳಿಯದಂತೆ ಭಕ್ತಾದಿಗಳಿಗೆ ಸೂಚನೆ‌ ನೀಡಲಾಗಿದೆ.

ಕೃಷ್ಣನ ಬೀಡು ಉಡುಪಿಯಲ್ಲಿ ಮಳೆ: ಉಡುಪಿಯಲ್ಲಿ ಮುಂಗಾರು ಮಳೆ ಜೋರಾಗಿದೆ. ಜಿಲ್ಲೆಯಲ್ಲಿ ರಾತ್ರಿಯಿಡಿ ಭಾರೀ ಮಳೆ ಸುರಿದಿದೆ. ಜಿಲ್ಲೆಯ ತಗ್ಗು ಪ್ರದೇಶದಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನೀರು ನುಗ್ಗಿ ಸಮಸ್ಯೆ ಎದುರಾಗಿತ್ತು.

ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದೆ.ನಿನ್ನೆಯಿಂದಲೂ ಬಿಟ್ಟು-ಬಿಟ್ಟು ಸುರಿದ ಮಳೆಯಿಂದಾಗಿ ಮಲೆನಾಡಿಗರ ಜೀವನ ಅಸ್ತವ್ಯಸ್ತಗೊಂಡಿತ್ತು. ಮಲೆನಾಡು ತಾಲೂಕುಗಳಾದ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಕಳಸ ಭಾಗದಲ್ಲಿ ಭಾರೀ ಮಳೆ ಬಿದ್ದಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಸುತ್ತ ಮಳೆಯಾಗಿದೆ. ಗಾಳಿ-ಮಳೆ ಮಧ್ಯೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.