ರಾಜ್ಯ

ಪವಿತ್ರಾ ಗೌಡ ಮೇಕಪ್- ಮಹಿಳಾ SIಗೆ ನೊಟೀಸ್; ಮನೆ ಗೋಡೆ ಕುಸಿದು ನಾಲ್ವರು ಸಾವು; ಕಾಂಗ್ರೆಸ್ ಶಾಸಕಗೆ ಹನಿಟ್ರ್ಯಾಪ್! ಇವು ಇಂದಿನ ಪ್ರಮುಖ ಸುದ್ದಿಗಳು 26-06-24

ಪವಿತ್ರಾ ಗೌಡ ಮೇಕಪ್- ಮಹಿಳಾ SIಗೆ ನೊಟೀಸ್; ಮನೆ ಗೋಡೆ ಕುಸಿದು ನಾಲ್ವರು ಸಾವು; ಕಾಂಗ್ರೆಸ್ ಶಾಸಕಗೆ ಹನಿಟ್ರ್ಯಾಪ್! ಇವು ಇಂದಿನ ಪ್ರಮುಖ ಸುದ್ದಿಗಳು 26-06-24
Published On :

1. ವಾಲ್ಮೀಕಿ ನಿಗಮ ಹಗರಣ: ಸಿದ್ದು, ಶರಣ ಪ್ರಕಾಶ್ ರಾಜಿನಾಮೆ ಆಗ್ರಹಿಸಿ ಡಿಸಿ ಕಚೇರಿಗಳಿಗೆ ಬಿಜೆಪಿ ಮುತ್ತಿಗೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಜವಾಬ್ದಾರಿ ಹೊರಬೇಕು. ನಿಗಮದ ಅಧ್ಯಕ್ಷರು ಮತ್ತು ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಈ ತಿಂಗಳ 28ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರ್ಬಳಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಈ ಹಣವನ್ನು ದೋಚಿದೆ ಎಂದು ಆರೋಪಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ. ಆದರೂ ರಾಜ್ಯ ಸರ್ಕಾರ ಆತುರಾತುರವಾಗಿ ಎಸ್‌ಐಟಿಯನ್ನು ರಚಿಸಿ ತಮಗೆ ಬೇಕಾದಂತೆ ತನಿಖೆ ನಡೆಸುತ್ತಿದೆ ಎಂದು ಟೀಕಿಸಿದರು. ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು‌ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಸಾಯಿತೇಜ ಎಂಬಾತನನ್ನು ಹೈದರಾಬಾದ್ ನಲ್ಲಿ ಬಂಧಿಸಿರುವ ಅಧಿಕಾರಿಗಳು ವಿಚಾರಣೆಗಾಗಿ ಬೆಂಗಳೂರಿಗೆ ಕರೆತಂದಿದ್ದಾರೆ. ಇದರೊಂದಿಗೆ ಪ್ರಕರಣ ಸಂಬಂಧ ಬಂಧಿತರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

2. ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಇಂದು ಜಾಮೀನು ಅರ್ಜಿ ವಜಾಗೊಳಿಸಿದರು. ಈ ನಡುವೆ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಇದರೊಂದಿಗೆ ಅವರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೇರಿದೆ.

3. ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರನ್ನು ಯಾಸಿರ್, ಪತ್ನಿ ಮರಿಯಮ್ಮ ಮತ್ತು ಮಕ್ಕಳಾದ ರಿಯಾನ ಮತ್ತು ರಿಫಾನ ಎಂದು ಗುರುತಿಸಲಾಗಿದೆ. ಅಬೂಬಕ್ಕರ್ ಎಂಬವರಿಗೆ ಸೇರಿದ ಮನೆಯ ಗೋಡೆಯು ಯಾಸಿರ್ ಅವರ ಮನೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಮನೆ ಕುಸಿತವಾಗಿದೆ.

4. ನಟಿ ಪವಿತ್ರಾ ಗೌಡಾಗೆ ಮೇಕ್ ಅಪ್ ಮಾಡಿಕೊಳ್ಳುವುದಕ್ಕೆ ಅವಕಾಶ: ಮಹಿಳಾ SI ನೇತ್ರಾವತಿಗೆ ನೊಟೀಸ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಪವಿತ್ರಾ ಗೌಡಾಗೆ ಪೊಲೀಸ್ ಕಸ್ಟಡಿ ವೇಳೆ ಮೇಕ್ ಅಪ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಸಬ್-ಇನ್ಸ್ ಪೆಕ್ಟರ್ ನೇತ್ರಾವತಿಗೆ ಡಿಸಿಪಿ ಗಿರೀಶ್ ಅವರು ನೊಟೀಸ್ ನೀಡಿದ್ದು ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಜೂ.15ರಂದು ಮನೆ ಸ್ಥಳ ಮಹಜರಿಗೆಂದು ಕರೆದೊಯ್ದ ವೇಳೆ ಪವಿತ್ರಾ ಗೌಡ ಮನೆಯಿಂದ ಹೊರಬಂದಾಗ ಲಿಪ್ ಸ್ಟಿಕ್ ಹಾಗೂ ಮೇಕಪ್ ಮಾಡಿಕೊಂಡು ನಗುತ್ತಾ ಹೊರಬಂದಿದ್ದು ಆ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ಇದರ ವಿರುದ್ಧ ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿತ್ತು.

5. ಕಾಂಗ್ರೆಸ್ ಶಾಸಕ ಹರೀಶ್‌ಗೌಡಗೆ ಹನಿಟ್ರ್ಯಾಪ್‌

ಮೈಸೂರು ನಗರದ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್‌ಗೌಡಗೆ ಹನಿಟ್ರ್ಯಾಪ್‌ ಮೂಲಕ ಬ್ಲ್ಯಾಕ್‌ಮೇಲ್‌ ಮಾಡಿದ್ದ ಆರೋಪದ ಅಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಸಂತೋಷ್‌ ಹಾಗೂ ಪುಟ್ಟರಾಜ್‌ ಬಂಧಿತ ಆರೋಪಿಗಳಾಗಿದ್ದಾರೆ. ನನ್ನ ವಿರುದ್ಧ ನಕಲಿ ವಿಡಿಯೊ ಸೃಷ್ಟಿಸಿ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಶಾಸಕ ಸಿಸಿಬಿ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

6. ಹುಬ್ಬಳ್ಳಿ ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್

ಎರಡು ದಿನಗಳ ಹಿಂದಷ್ಟೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು. ಇದರ ಬೆನ್ನಲ್ಲೇ ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕರಿಗೆ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಬಂದಿದೆ. ನಂತರ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗಿ ಇದು ಹುಸಿ ಬಾಂಬ್ ಸಂದೇಶ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣ ನಿರ್ದೇಶಕ ರೂಪೇಶ್ ಕುಮಾರ್ಗೆ ಲಾಂಗ್ ಲೀವ್ ಪ್ಯಾಲೆಸ್ತೇನ್ ಎಂಬ ಹೆಸರಿನ ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.