ರಾಜ್ಯ

ಪ್ರವಾಹ ಹಾನಿಗೆ ಅಧಿಕಾರಿಗಳ ನಿರಾಸಕ್ತಿ, ನಿರ್ಲಕ್ಷ್ಯ ಕಾರಣ: ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಸರ್ಕಾರ

ಅಧಿಕಾರಿಗಳು ಕಾಲಕಾಲಕ್ಕೆ ನೀರಾವರಿ ಕಾಲುವೆಗಳ ಬಲವರ್ಧನೆಗೆ ಮುಂದಾಗಬೇಕಿದ್ದು, ಕೆಆರ್‌ಪೇಟೆ ತಾಲ್ಲೂಕಿನ ಮಂದಗೆರೆಯಲ್ಲಿ ತಡೆಗೋಡೆಗಳು ಕುಸಿದು ಬೀಳಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ.

ಪ್ರವಾಹ ಹಾನಿಗೆ ಅಧಿಕಾರಿಗಳ ನಿರಾಸಕ್ತಿ, ನಿರ್ಲಕ್ಷ್ಯ ಕಾರಣ: ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಸರ್ಕಾರ
ಸಚಿವ ಕೃಷ್ಣ ಬೈರೇಗೌಡ
Published On :

ಮೈಸೂರು: ನಿತ್ಯವೂ ನಿರ್ವಹಣಾ ಕಾಮಗಾರಿ ಕೈಗೊಳ್ಳದೇ ಇರುವುದು ಪ್ರವಾಹ ಹಾನಿಗೆ ಕಾರಣ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆಯಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದರು.

ಅಧಿಕಾರಿಗಳು ಕಾಲಕಾಲಕ್ಕೆ ನೀರಾವರಿ ಕಾಲುವೆಗಳ ಬಲವರ್ಧನೆಗೆ ಮುಂದಾಗಬೇಕಿದ್ದು, ಕೆಆರ್‌ಪೇಟೆ ತಾಲ್ಲೂಕಿನ ಮಂದಗೆರೆಯಲ್ಲಿ ತಡೆಗೋಡೆಗಳು ಕುಸಿದು ಬೀಳಲು ಅವರ ನಿರ್ಲಕ್ಷ್ಯವೇ ಕಾರಣ. ಸಾವಿರಾರು ಎಕರೆಗೆ ನೀರುಣಿಸುವ ಕೆರೆ ಕಟ್ಟೆಗಳ ಸುರಕ್ಷತೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಹೇಳಿದರು.

ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದೆ. ಕೆ ಆರ್ ಎಸ್ ಜಲಾಶಯದಿಂದ 1ಲಕ್ಷಕ್ಕೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದ್ದು 1ಲಕ್ಷ 60ಸಾವಿರ ಕೂಸೆಕ್ಸ್ ನೀರು ತಮಿಳುನಾಡಿಗೆ ಹರಿಬಿಡಲಾಗುತ್ತಿದೆ. ಕೃಷ್ಣ ನದಿಯಲ್ಲೂ ಕೂಡ 2.5 ಲಕ್ಷ ನೀರನ್ನು ಅಣೆಕಟ್ಟೆಯಿಂದ ನದಿಗೆ ಬಿಡಲಾಗುತ್ತಿದೆ. ಪ್ರವಾಹದ ಮಟ್ಟಕ್ಕಿಂತ ನೀರಿನ ಹರಿವಿನ ಪ್ರಮಾಣ ಕಡಿಮೆ ಇದೆ. ಮಳೆ ಬಿಡುವು ಕೊಟ್ಟಿರುವುದರಿಂದ ಪ್ರವಾಹ ಪರಿಸ್ಥಿತಿ ಸುಧಾರಿಸುವ ಹಂತದಲ್ಲಿದೆ. ಹೇಮಾವತಿ ಹಾಗೂ ಕಾವೇರಿ ನದಿ ಪಾತ್ರದಲ್ಲಿರುವ ಹಾಸನ. ಕೆ ಆರ್ ಪೇಟೆ. ಟಿ. ನರಸೀಪುರ. ಶ್ರೀರಂಗಪಟ್ಟಣ ತಾಲ್ಲೂಕುಗಳ ತಗ್ಗು ಪ್ರದೇಶದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದರಲು ಮನವಿ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಚುರುಕು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೆ.ಆರ್.ಪೇಟೆಯ ಮಂದಗೆರೆಯ ಪ್ರದೇಶದಲ್ಲಿ ನದಿಯ ತಡೆಗೋಡೆ ಒಡೆದು ಮಣ್ಣು ಕೊರಕಲು ಆಗುತ್ತಿದೆ. ಈ ಭಾಗದಲ್ಲಿ ಕೇವಲ ಮಣ್ಣಿನ ಬ್ಯಾಗ್ ಬದಲು ಸೈಜು ಕಲ್ಲನ್ನು ಸಹ ಬಳಕೆ ಮಾಡಲು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಇದರಿಂದ ಮಣ್ಣು ಕುಸಿತದ ಪ್ರಮಾಣ ಕಡಿಮೆಯಾಗಲಿದೆ ಎಂದರು.

ನೆರೆ ಪ್ರದೇಶದಲ್ಲಿರುವ ಜನರ ಸ್ಥಳಾಂತರಕ್ಕೆ ಸಾರ್ವಜನಿಕರ ಮನವೊಲಿಕೆ ಮಾಡಬೇಕು. ನೆರೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಒಂದು ವಾರದ ನಂತರ ನಿಖರ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

ವಿಪತ್ತು ನಿರ್ವಹಣೆಗಾಗಿ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗೆ ಒಟ್ಟು 770 ಕೋಟಿ ಹಣವನ್ನು ಮೀಸಲಿರಿಸಲಾಗಿದೆ. ಮಂಡ್ಯ ಜಿಲ್ಲೆಗೂ ಸಹ 20 ಕೋಟಿ ಹಣ ನೀಡಲಾಗಿದೆ. ಎಲ್ಲಾ ತಾಲ್ಲೂಕುಗಳಿಗೆ 25 ಲಕ್ಷ ರೂ ನೀಡಲಾಗಿದೆ . ಸಣ್ಣ ಪುಟ್ಟ ತೊಂದರೆಯಾದಾಗ ರಾಜ್ಯ ಸರ್ಕಾರ ನಿಭಾಯಿಸುತ್ತದೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಹಾನಿ ಆದಾಗ ಮಾತ್ರ ಎನ್ ಡಿ ಆರ್ ಎಫ್ ತಂಡಕ್ಕೆ ಆಹ್ವಾನ ನೀಡಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.