ಅಕ್ಕಿ ದರ ವ್ಯತ್ಯಾಸದಿಂದ 120 ಕೋಟಿ ರೂ ನಷ್ಟ: ಪಡಿತರ ಅಕ್ಕಿಗೂ, ಶಾಲೆಗೆ ನೀಡುವ ಅಕ್ಕಿಗೂ 5 ರೂ ವ್ಯತ್ಯಾಸ ಏಕೆ?
ಒಂದೇ ಗುಣಮಟ್ಟದ ಅಕ್ಕಿಯನ್ನು ಎರಡೆರಡು ದರದಲ್ಲಿ ಖರೀದಿಸುತ್ತಿರುವುದು ಯಾಕೆ? ಇದರಿಂದ ನಷ್ಟ ಉಂಟಾಗುವುದಿಲ್ಲವೇ? ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿರುವ ಅಕ್ಕಿ ಗುಣಮಟ್ಟ ಏನಾದರೂ ಕಳಪೆ ಇದೆಯೇ? ಹೌದು, ಎಂದಾದಲ್ಲಿ ಮಕ್ಕಳ ಆರೋಗ್ಯದ ಗತಿ ಏನು?

ಬೆಂಗಳೂರು: ಆಹಾರ ಇಲಾಖೆಯ ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಿಸುವ ಒಂದು ಕೆ ಜಿ ಅಕ್ಕಿ 34.60 ರೂ ನಲ್ಲಿ ಖರೀದಿಸುತ್ತಿದ್ದರೆ, ಶಿಕ್ಷಣ ಇಲಾಖೆಯಲ್ಲಿ ಅಕ್ಷರ ದಾಸೋಹ ಅಕ್ಕಿ 29.30 ರೂ ರೂಗೆ ಖರೀದಿಯಾಗುತ್ತಿದೆ. ಪಡಿತರ ಅಕ್ಕಿಗೂ, ಶಾಲೆಗೆ ನೀಡುವ ಅಕ್ಕಿಗೂ 5 ರೂ ವ್ಯತ್ಯಾಸ ಏಕೆ ಎಂದು ಮೇಲ್ಮನೆಯಲ್ಲಿ ಬಿಜೆಪಿ ಪ್ರಶ್ನೆ ಮಾಡಿದೆ.
ಮೇಲ್ಮನೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಅವರು, ರಾಜ್ಯಾದ್ಯಂತ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗಾಗಿ ಆಹಾರ, ನಾಗರಿಕ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಕೇಂದ್ರದ ಭಾರತೀಯ ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ಕೇಂದ್ರೀಯ ಭಂಡಾರದಿಂದ ಪ್ರತೀ ಕೆಜಿಗೆ 34.60 ರೂ. ದರದಲ್ಲಿ ಅಕ್ಕಿ ಖರೀದಿಸುತ್ತಿದೆ. ಇದೇ ಗುಣಮಟ್ಟದ ಅಕ್ಕಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ “ಅಕ್ಷರ ದಾಸೋಹ’ ಯೋಜನೆಯಡಿ ಕೆಜಿಗೆ 29.30 ರೂ.ಗೆ ಖರೀದಿಸುತ್ತಿದೆ. ಹೆಚ್ಚು-ಕಡಿಮೆ ಪ್ರತೀ ಕೆಜಿಗೆ 5 ರೂ. ವ್ಯತ್ಯಾಸ ಆಗುತ್ತಿದ್ದು, ಮಾಸಿಕ 120 ಕೋಟಿ ರೂ. ಸರಕಾರಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.
ಒಂದೇ ಗುಣಮಟ್ಟದ ಅಕ್ಕಿಯನ್ನು ಎರಡೆರಡು ದರದಲ್ಲಿ ಖರೀದಿಸುತ್ತಿರುವುದು ಯಾಕೆ? ಇದರಿಂದ ನಷ್ಟ ಉಂಟಾಗುವುದಿಲ್ಲವೇ? ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿರುವ ಅಕ್ಕಿ ಗುಣಮಟ್ಟ ಏನಾದರೂ ಕಳಪೆ ಇದೆಯೇ? ಹೌದು, ಎಂದಾದಲ್ಲಿ ಮಕ್ಕಳ ಆರೋಗ್ಯದ ಗತಿ ಏನು ಎಂದು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅವರು, ಗುಣಮಟ್ಟ ಒಂದೇ ಆಗಿದ್ದರೂ ಖರೀದಿ ವ್ಯವಸ್ಥೆ ಬೇರೆ ಬೇರೆಯಾಗಿದೆ. ಇದಕ್ಕೆಲ್ಲ ಕೇಂದ್ರ ಸರಕಾರವೇ ಕಾರಣ. ಮೊದಲು ಅಕ್ಕಿ ದಾಸ್ತಾನು ಇದೆ ಅಂತ ಹೇಳಿದರು. ಅನಂತರ ಲಭ್ಯವಿಲ್ಲ ಅಂತ ಕೈಎತ್ತಿದರು. ಆಮೇಲೆ 29 ರೂ.ಗೆ ಕೆಜಿ ಪ್ಯಾಕೆಟ್ ಅಕ್ಕಿಯನ್ನು ಮಾರುಕಟ್ಟೆಗೆ ಬಿಟ್ಟರು ಎಂದು ತಿರುಗೇಟು ನೀಡಿದರು.
ಸಚಿವರು ಕೇಂದ್ರದ ಮೇಲೆ ಆರೋಪ ಮಾಡಿದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಕರ್ನಾಟಕಕ್ಕೆ ಕೇಂದ್ರ ಅನ್ನ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು.
ರಾಜ್ಯ ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.
ಸರಕಾರದಿಂದ ಹಣ ಲೂಟಿಯಾಗುತ್ತಿದೆ. ಇದನ್ನು ಪರಿಶೀಲಿಸಲು ತನಿಖೆಗೆ ಆದೇಶಿಸಬೇಕು. ಸದನದಲ್ಲ ಈ ವಿಚಾರ ಸುದೀರ್ಘ ಚರ್ಚೆಯಾಗಬೇಕೆಂದು ಆಗ್ರಹಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



