ದೇವರಾಜು ಅರಸು ಟ್ರಕ್ ಟರ್ಮಿನಲ್ ಅಕ್ರಮ: ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್ ವೀರಯ್ಯ ಬಂಧನ
ದೇವರಾಜು ಅರಸು ಟ್ರಕ್ ಟರ್ಮಿನಲ್ ಗುತ್ತಿಗೆ ಅವ್ಯವಹಾರದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಡಿ.ಎಸ್. ವೀರಯ್ಯ, ಗುತ್ತಿಗೆದಾರರಿಂದ ಮೂರು ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ (ಡಿಡಿಯುಟಿಟಿಎಲ್) ಅಕ್ರಮ ಸಂಬಂಧ ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಎಸ್ ವೀರಯ್ಯ ಅವರನ್ನು ಸಿಐಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ದೇವರಾಜು ಅರಸು ಟ್ರಕ್ ಟರ್ಮಿನಲ್ ಗುತ್ತಿಗೆ ಅವ್ಯವಹಾರದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಡಿ.ಎಸ್. ವೀರಯ್ಯ, ಗುತ್ತಿಗೆದಾರರಿಂದ ಮೂರು ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.
2021ರಿಂದ 2023ರ ಅವಧಿಯಲ್ಲಿ ಡಿಡಿಯುಟಿಟಿಎಲ್ ನಿಗಮದಲ್ಲಿ ಗುತ್ತಿಗೆ ನೀಡಿಕೆಯಲ್ಲಿ ಅಕ್ರಮ ನಡೆದಿದೆ ಎಂದು ವಿಲ್ಸನ್ ಗಾರ್ಡನ್ ಠಾಣೆಗೆ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ ಎನ್ ಶಿವಪ್ರಕಾಶ್ ದೂರು ನೀಡಿದ್ದರು. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಅಂತೆಯೇ ತನಿಖೆಗಿಳಿದ ಸಿಐಡಿ ಅಧಿಕಾರಿಗಳು ಶುಕ್ರವಾರ ಅವರನ್ಜು ಬಂಧಿಸಿದ್ದಾರೆ.
2021ರಿಂದ 2023ರ ನಡುವೆ ಡಿ ಎಸ್ ವೀರಯ್ಯ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷರಾಗಿದ್ದಾಗ 55 ಕೋಟಿ ರೂಪಾಯಿ ಅಕ್ರಮ ಎಸಗಿರುವ ಆರೋಪ ಡಿ ಎಸ್ ವೀರಯ್ಯ ಮೇಲೆ ಕೇಳಿ ಬಂದಿದೆ.
ಟರ್ಮಿನಲ್ ವತಿಯಿಂದ 2021 ರಿಂದ 2023ರ ನಡುವೆ 821 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 9.18 ಕೋಟಿ ರೂ. ವೆಚ್ಚದ 153 ಕಾಮಗಾರಿಗಳನ್ನಷ್ಟೇ ನಿರ್ವಹಿಸಲಾಗಿತ್ತು. ಉಳಿದ 668 ಕಾಮಗಾರಿಗಳನ್ನು ಕೈಗೊಳ್ಳದೆಯೇ ನಕಲಿ ಬಿಲ್ ಸೃಷ್ಟಿಸಿ 39.42 ಕೋಟಿ ರೂ.ಗಳನ್ನು ಮೂರು ಗುತ್ತಿಗೆ ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡಲಾಗಿತ್ತು.
ಮೆಸರ್ಸ್ ಎಸ್.ಎಸ್.ಎಂಟರ್‌ಪ್ರೈಸಸ್, ವೆನಿಶಾ ಎಂಟರ್‌ಪ್ರೈಸಸ್, ಮಯೂರ್ ಅಡ್ವರ್ಟೈಸ್‌ಮೆಂಟ್ ಹೆಸರಿನ ಗುತ್ತಿಗೆ ಏಜೆನ್ಸಿಗಳಿಗೆ 39.42 ಕೋಟಿ ರೂ. ಪಾವತಿಯಾಗಿತ್ತು. ಇದಕ್ಕೆ ಪ್ರತಿಯಾಗಿ ಗುತ್ತಿಗೆದಾರರು ವರ್ತಕರ ಖಾತೆಗಳಿಗೆ ಹಣ ಜಮಾ ಮಾಡಿದ್ದರು. ಸುಮಾರು 10 ವರ್ತಕ ಬ್ಯಾಂಕ್ ಖಾತೆಗಳಿಂದ ಅಂದಿನ ಅಧ್ಯಕ್ಷರಾದ ಡಿ.ಎಸ್. ವೀರಯ್ಯ ಅವರ ಬ್ಯಾಂಕ್ ಖಾತೆಗೆ ಹಂತ- ಹಂತವಾಗಿ ಮೂರು ಕೋಟಿ ರೂ. ವರ್ಗಾವಣೆ ಆಗಿರುವುದಕ್ಕೆ ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ. ಗುತ್ತಿಗೆದಾರರು ನೀಡಿದ ಕಿಕ್‌ಬ್ಯಾಕ್ ಹಣದಲ್ಲಿಯೇ ಡಿ.ಎಸ್. ವೀರಯ್ಯ ಅವರು ಕೆಂಗೇರಿ ವ್ಯಾಪ್ತಿಯ ಉಲ್ಲಾಳುವಿನಲ್ಲಿ ಒಂದು ನಿವೇಶನ ಖರೀದಿ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



