ರಾಜ್ಯ

POCSO Case: ಖುದ್ದು ಹಾಜರಿಯಿಂದ BSYಗೆ ಹೈಕೋರ್ಟ್ ವಿನಾಯ್ತಿ; ಕೇಸ್‌ ರದ್ದು ಕೋರಿದ್ದ ಅರ್ಜಿ ವಿಚಾರಣೆ ಜುಲೈ 26ಕ್ಕೆ ಮುಂದೂಡಿಕೆ!

ಜುಲೈ 15 ರಂದು ಖುದ್ದಾಗಿ ಹಾಜರಾಗುವಂತೆ ಬಿಎಸ್‌ವೈಗೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.

POCSO Case: ಖುದ್ದು ಹಾಜರಿಯಿಂದ BSYಗೆ ಹೈಕೋರ್ಟ್ ವಿನಾಯ್ತಿ; ಕೇಸ್‌ ರದ್ದು ಕೋರಿದ್ದ ಅರ್ಜಿ ವಿಚಾರಣೆ ಜುಲೈ 26ಕ್ಕೆ ಮುಂದೂಡಿಕೆ!
ಬಿಎಸ್ ಯಡಿಯೂರಪ್ಪ
Published On :

ಬೆಂಗಳೂರು: ಪೋಕ್ಸೊ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ಹೈಕೋರ್ಟ್ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.

ಹೌದು.. ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಇಂದು ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಿದ್ದು, ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ. ಬಿಎಸ್ ವೈ ಮಾತ್ರವಲ್ಲದೇ ಇತರೆ ಆರೋಪಿಗಳಿಗೂ ಖುದ್ದು ಹಾಜರಿಯಿಂದ ವಿನಾಯಿತಿ ನೀಡಲಾಗಿದೆ.

ಆರೋಪಿಗಳ ಬದಲಿಗೆ ವಕೀಲರು ಹಾಜರಾಗಿ ವಿನಾಯಿತಿ ಕೋರಲು ಅವಕಾಶ ನೀಡಲಾಗಿದೆ. ಜುಲೈ 15 ರಂದು ಖುದ್ದಾಗಿ ಹಾಜರಾಗುವಂತೆ ಬಿಎಸ್‌ವೈಗೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ, ಖುದ್ದು ಹಾಜರಿಗೆ ಹೈಕೋರ್ಟ್ ವಿನಾಯಿತಿ ನೀಡಿದೆ.

ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 27ರಂದು ಸಿಐಡಿ ಅಧಿಕಾರಿಗಳು ಚಾರ್ಜ್‌ಶೀಟ್‌ ಸಲ್ಲಿಸಿದ್ದರು. 75 ಸಾಕ್ಷಿಗಳ ಹೇಳಿಕೆ ಸೇರಿದಂತೆ 750 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು.

ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆ ಸೆಕ್ಷನ್‌ 8, ಐಪಿಸಿ ಸೆಕ್ಷನ್‌ಗಳಾದ 354(ಎ), 204, 214 ಅಡಿ, 2ನೇ ಆರೋಪಿ ಅರುಣ್‌ ಎಂ.ವೈ, 3ನೇ ಆರೋಪಿ ಎಂ.ರುದ್ರೇಶ್‌ ಮತ್ತು 4ನೇ ಆರೋಪಿ ಜಿ.ಮರಿಸ್ವಾಮಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 204, 214ರ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.

ವಿಚಾರಣೆ ಜುಲೈ 26ಕ್ಕೆ ಮುಂದೂಡಿಕೆ!

ಇದೇ ವೇಳೆ ಪೋಕ್ಸೊ ಪ್ರಕರಣ ರದ್ದು ಕೋರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜುಲೈ 26ಕ್ಕೆ ನಡೆಸಲು ಹೈಕೋರ್ಟ್ ದಿನಾಂಕ ನಿಗದಿಪಡಿಸಿದೆ. ಅಲ್ಲಿಯವರೆಗೆ ಪ್ರಕರಣದಲ್ಲಿ ಖುದ್ದು ಹಾಜರಿಗೆ ಮಾಜಿ ಸಿಎಂಗೆ ಕೋರ್ಟ್‌ ವಿನಾಯಿತಿ ನೀಡಿದೆ.

ಏನಿದು ಪ್ರಕರಣ?

ಫೆಬ್ರವರಿ 2 ರಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 17 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಈ ವರ್ಷ ಮಾರ್ಚ್ 14 ರಂದು ಪ್ರಕರಣ ದಾಖಲಿಸಲಾಗಿತ್ತು. 2024ರ ಫೆಬ್ರವರಿ 2ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್‌ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್‌ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣದ ವಿಚಾರವಾಗಿ ಸಂತ್ರಸ್ಥೆಯ ತಾಯಿಗೆ ಬಿಎಸ್ ವೈ ಸುಮ್ಮನಾಗಲು ಹಣ ನೀಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ.

ಯಡಿಯೂರಪ್ಪ ಅವರ ಸಹಾಯಕರಾದ ಇತರ ಮೂವರು ಸಹ ಆರೋಪಿಗಳಾದ ಅರುಣ್ ವೈ ಎಂ, ರುದ್ರೇಶ್ ಎಂ ಮತ್ತು ಜಿ ಮರಿಸ್ವಾಮಿ ವಿರುದ್ಧವೂ ಐಪಿಸಿ ಸೆಕ್ಷನ್ 204 ಮತ್ತು 214 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಜೂನ್‌ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್‌ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.