ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು
ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ.

ಬೆಳಗಾವಿ: ಮುಂಗಾರು ಆರಂಭದಿಂದಲೂ ರಾಜ್ಯದಲ್ಲಿ ಸಮೃದ್ಧ ಮಳೆಯಾಗುತ್ತಿದ್ದು, ಕರ್ನಾಟಕದ ಗಡಿಯಲ್ಲಿರುವ ಅಂಬೋಲಿ ಬಳಿಯ ಪ್ರಶಾಂತ ಪಶ್ಚಿಮ ಘಟ್ಟಗಳಲ್ಲಿರುವ ಕುಂಬ್ವಾಡೆ ಜಲಪಾತ (ಬಾಬಾ ಜಲಪಾತ) ಭೋರ್ಗರೆಯುತ್ತಿದೆ. ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ರುದ್ರ ರಮಣೀಯ ದೃಶ್ಯ ಕಂಡು ಪ್ರವಾಸಿಗರು ಫುಲ್ ಖುಷ್ ಆಗುತ್ತಿದ್ದಾರೆ.
ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಇದು ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಎನ್‌ಸಿಪಿ ಹಿರಿಯ ನಾಯಕ ದಿವಂಗತ ಬಾಬಾಸಾಹೇಬ್ ಕುಪೇಕರ್ ಅವರ ಒಡೆತನದಲ್ಲಿರುವ ಖಾಸಗಿ ಭೂಮಿಯಲ್ಲಿ ಈ ಜಲಪಾತವಿದ್ದು, ಜಲಪಾತಕ್ಕೆ ವಾರಾಂತ್ಯದ ವೇಳೆ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುತ್ತಿದ್ದಾರೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿನ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ವ್ಯಾಪಾರಸ್ಥರು ಸಂತಸಗೊಂಡಿದ್ದಾರೆ.
ಈ ಹಿಂದೆ ಭೂಕುಸಿತ ಪರಿಣಾಮ ಬಾಬಾಸಾಹೇಬ್ ಕುಪೇಕರ್ ಅವರ ಕುಟುಂಬ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರು. ನಿರ್ಬಂಧದ ಹೊರತಾಗಿಯೂ ಪ್ರವಾಸಿಗರು ಸ್ಥಳಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಿರಲಿಲ್ಲ. ಬಳಿಕ ಕುಪೇಕರ್ ಅವರ ಕುಟುಂಬ, ಸ್ಥಳದಲ್ಲಿ ಸೂಕ್ತ ರಸ್ತೆ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿತು.
ಪ್ರವಾಸಿ ತಾಣದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಲ್ಲಿ ಒಬ್ಬರಾದ ಮಧುಕರ ಗಾವಡೆ ಮಾತನಾಡಿ, ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಭೂಕುಸಿತಗಳು ಸಾಮಾನ್ಯವಾಗಿದೆ. ಸ್ಥಳದಲ್ಲಿ ನಿರ್ಬಂಧ ಹೇರಿದ ಬಳಿಕ ಸ್ಥಳಕ್ಕೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗತೊಡಗಿತ್ತು ಎಂದು ಹೇಳಿದ್ದಾರೆ.
ಜಲಪಾತದ ಸುತ್ತಮುತ್ತಲಿನ ಭೂದೃಶ್ಯವು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ, ಪರಿಸರ ಪ್ರಿಯಕರಿಗೆ ಮತ್ತು ಛಾಯಾಗ್ರಾಹಕರಿಗೆ ಫೋಟೋ ತೆಗೆಯಲು ಅತ್ಯುತ್ತಮ ಅವಕಾಶ ನೀಡುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



