ರಾಜ್ಯ

ಬೆಂಗಳೂರಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ 9,651 ಮಂದಿಗೆ ನೇರ ಉದ್ಯೋಗ: ಸಚಿವ ಶರಣಪ್ರಕಾಶ್ ಪಾಟೀಲ್

ಯುವ ಸಮೃದ್ಧಿ ಸಮ್ಮೇಳನದಲ್ಲಿ ಸುಮಾರು 9,651 ಉದ್ಯೋಗ ಆಕಾಂಕ್ಷಿಗಳಿಗೆ ಸ್ಥಳದಲ್ಲೇ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದೇವೆ ಎಂದು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ  9,651 ಮಂದಿಗೆ ನೇರ ಉದ್ಯೋಗ: ಸಚಿವ ಶರಣಪ್ರಕಾಶ್ ಪಾಟೀಲ್
ಡಾ.ಶರಣ ಪ್ರಕಾಶ್ ಪಾಟೀಲ್
Published On :

ಬೆಂಗಳೂರು: ರಾಜಧಾನಿ ಬೆಂಗಳೂರು ಅರಮನೆ ಮೈದಾನದಲ್ಲಿ ಫೆಬ್ರವರಿ 26 ಮತ್ತು 27ರಂದು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ನಡೆದ ಯುವ ಸಮೃದ್ಧಿ ಸಮ್ಮೇಳನದಲ್ಲಿ ಸುಮಾರು 9,651 ಉದ್ಯೋಗ ಆಕಾಂಕ್ಷಿಗಳಿಗೆ ಸ್ಥಳದಲ್ಲೇ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದೇವೆ ಎಂದು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 53,913 ಪುರುಷರು, 32,494 ಮಹಿಳೆಯರು, ಇತರೆ 42 ಸೇರಿಂದತೆ ಒಟ್ಟು ಆನ್‍ಲೈನ್ ಮೂಲಕ 86,451 ಅಭ್ಯರ್ಥಿಗಳು ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಸಮ್ಮೇಳನಕ್ಕೆ 44527 ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಶೈಕ್ಷಣಿಕ ಅರ್ಹತೆಗನುಗುಣವಾಗಿ ಒಟ್ಟು 9,651 ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ನೀಡಿದ್ದೇವೆ ಎಂದರು.

16,865 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. 2,457 ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿದೆ. 15,461 ಅಭ್ಯರ್ಥಿಗಳು ಸಂದರ್ಶನಕ್ಕೊಳಗಾಗಿದ್ದರು. ಅಭ್ಯರ್ಥಿಗಳ ಪೂರ್ಣ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇವರಿಗೂ ಕೂಡ ಉದ್ಯೋಗ ನೀಡಲಾಗುತ್ತದೆ. ಒಟ್ಟಾರೆ ಎರಡು ದಿನ ನಡೆದ ಸಮ್ಮೇಳನ ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು.

ಸಮ್ಮೇಳನದಲ್ಲಿ ವೈಮಾನಿಕ ಮತ್ತು ನಾಗರಿಕ ವಲಯದಿಂದ 26, ಕೃಷಿ 6, ಉಡುಪು ವಲಯ 6, ಆಟೋಮೆಟಿವ್ 74, ಸೌಂದರ್ಯ ವಲಯ 3, ಆರೋಗ್ಯ ಕ್ಷೇತ್ರ 27, ಎಲೆಕ್ಟ್ರಾನಿಕ್ ವಲಯ 29, ಜವಳಿ 1, ಟೆಲಿಕಾಂ 19, ಸೇವಾ ವಲಯ 36, ಮೂಲಭೂತ ಉಪಕರಣಗಳ ವಲಯ 1 ಸೇರಿದಂತೆ ವಿವಿಧ ವಲಯಗಳಲ್ಲಿ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.

ವಿಭಾಗವಾರು ಮೇಳ: ಮೊದಲ ಹಂತದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಯಶಸ್ವಿ ಯುವ ಸಮೃದ್ಧಿ ಸಮ್ಮೇಳನ ನಡೆದಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ರಾಜ್ಯದ ಮೂರು ಪ್ರಮು ವಿಭಾಗಗಳಲ್ಲಿ ಯುವ ಸಮೃದ್ಧಿ ಸಮ್ಮೇಳನ ನಡೆಸಲಾಗುವುದು ಎಂದು ಶರಣಪ್ರಕಾಶ್ ಪಾಟೀಲ್ ಹೇಳಿದರು. ಕಲಬುರಗಿ, ಬೆಳಗಾವಿ ಮತ್ತು ಮೈಸೂರಿನಲ್ಲಿ ಉದ್ಯೋಗ ಮೇಳವನ್ನು ನಡೆಸಲಾಗುವುದು. ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ವಿಭಾಗವಾರು ಉದ್ಯೋಗ ಮೇಳ ನಡೆಸುವ ಮಾದರಿಯಂತೆ ರಾಜ್ಯದ ಎರಡು ಕಡೆ ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ಕೇಂದ್ರ ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಹಾಗೂ ಮೈಸೂರಿನಲ್ಲಿ ಈ ಎರಡು ತರಬೇತಿ ಕೇಂದ್ರಗಳು ಪ್ರಾರಂಭವಾಗಲಿವೆ. ವಿವಿಧ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ ಸುಮಾರು 25 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುತ್ತದೆ. ಈಗಾಗಲೇ ಇದಕ್ಕೆ ಇಲಾಖೆ ವತಿಯಿಂದ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪಾಟೀಲ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.