ರಾಜ್ಯ

ಹೊಸ ಸಂಪ್ರದಾಯ: ಬಜೆಟ್ ಪ್ರತಿ ತರಲು ಸೂಟ್ ಕೇಸ್ ಬದಲಾಗಿ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಬ್ಯಾಗ್ ಬಳಸಿದ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸೂಟ್‌ಕೇಸ್‌ ಬಿಟ್ಟು ಲಿಡ್ಕರ್ ಸಂಸ್ಥೆಯ ಲೆದರ್‌ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಹೊಸ ಸಂಪ್ರದಾಯ: ಬಜೆಟ್ ಪ್ರತಿ ತರಲು ಸೂಟ್ ಕೇಸ್ ಬದಲಾಗಿ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಬ್ಯಾಗ್ ಬಳಸಿದ ಸಿಎಂ ಸಿದ್ದರಾಮಯ್ಯ
ಲಿಡ್ಕರ್ ಸಂಸ್ಥೆಯ ಬ್ಯಾಗ್ ನಲ್ಲಿ ಬಜೆಟ್ ಪ್ರತಿ ತಂದ ಸಿಎಂ ಸಿದ್ದಪಾಮಯ್ಯ — ANI
Published On :

ಬೆಂಗಳೂರು: ಹಾಲಿ ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೊದಲ ಪೂರ್ಣಕಾಲಿಕ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸೂಟ್‌ಕೇಸ್‌ ಬಿಟ್ಟು ಲಿಡ್ಕರ್ ಸಂಸ್ಥೆಯ ಲೆದರ್‌ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಹೌದು... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆಗೆ ಸೂಟ್‌ಕೇಸ್‌ ಬದಲು ಬ್ಯಾಗ್‌ ಹಿಡಿದು ತೆರಳುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಸರ್ಕಾರಿ ಸೌಮ್ಯದ ಲಿಡ್ಕರ್ ಕಂಪನಿಯ ಬ್ಯಾಗ್‌ನಲ್ಲಿ ಬಜೆಟ್ ಪ್ರತಿ ಇರಿಸಲಾಗಿದ್ದು, ಅದನ್ನು ತೆಗೆದುಕೊಂಡು ಸಿದ್ದರಾಮಯ್ಯ ಅವರು ಕಾವೇರಿಯಿಂದ ವಿಧಾನಸೌಧಕ್ಕೆ ತೆರಳಿದರು.

ಸಿದ್ದರಾಮಯ್ಯ ಅವರು ಈವರೆಗೆ ಬರೋಬ್ಬರಿ 14 ಬಜೆಟ್‌ಗಳನ್ನು ಮಂಡನೆ ಮಾಡಿದ ಖ್ಯಾತಿ ಹೊಂದಿದ್ದು, ಯಾವಾಗಲೂ ಬ್ರಿಟೀಷರ ಸಂಪ್ರದಾಯದಂತೆ ಸೂಟ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತಂದು ಅದನ್ನು ರಾಜ್ಯದ ಜನತೆಗೆ ತೋರಿಸಿ ಬಜೆಟ್ ಮಂಡನೆ ಮಾಡುತ್ತಿದ್ದರು. ಆದರೆ, ಈ ಬಾರಿ ಮೊದಲ ಬಾರಿಗೆ ತಮ್ಮ ಸಂಪ್ರದಾಯವನ್ನು ಬದಲಿಸಿಕೊಂಡಿದ್ದು, ಈ ಹಿಂದಿನ ಸಂಪ್ರದಾಯದಂತೆ ಸೂಟ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರದೇ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಸಂಸ್ಥೆಯ ಚರ್ಮದ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ತುಂಬಿಕೊಂಡು ಬಂದು ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.

ಅಂದಹಾಗೆ ಬ್ರಿಟೀಷ್ ಆಡಳಿತದ ಕಾಲದಿಂದಲೂ ಇತ್ತೀಚಿನವರೆಗೆ ಸೂಟ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ತಂದು ಬಜೆಟ್ ಮಂಡಿಸುವ ಸಂಪ್ರದಾಯ ಪಾಲನೆ ಮಾಡಲಾಗುತ್ತಿತ್ತು. ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳೂ ಕೂಡ ಇದೇ ಸಂಪ್ರದಾಯ ಅನುಕರಿಸುತ್ತಿದ್ದವು. ಆದರೆ, ಮೊದಲ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪ್ರತಿಗಳನ್ನು ತರಲು ಸೂಟ್‌ಕೇಸ್ ಬದಲಾಗಿ ಬ್ಯಾಗ್ ಬಳಕೆ ಮಾಡಿದ್ದರು. ಆದರೆ, ಈ ಬಾರಿ 2024ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡನೆಗೆ ಟ್ಯಾಬ್ ಬಳಕೆ ಮಾಡಿದ್ದರು.

ಮೊದಲು ಬ್ಯಾಗ್ ಬಳಕೆ ಮಾಡಿದ್ದ ಬೊಮ್ಮಾಯಿ

ಕರ್ನಾಟಕದಲ್ಲಿ ಬಜೆಟ್ ಪ್ರತಿ ತರಲು ಸೂಟ್ ಕೇಸ್ ಬದಲು ಬ್ಯಾಗ್ ತರುವ ಸಂಪ್ರದಾಯ ಆರಂಭಿಸಿದ್ದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಪ್ರದಾಯ ಪಾಲನೆ ಮಾಡಿದ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ತಮ್ಮ ಬಜೆಟ್‌ನಲ್ಲಿ ಲೆದರ್ ಬ್ಯಾಗ್‌ ಅನ್ನು ಬಳಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ನಟ ಡಾಲಿ ಧನಂಜಯ ರಾಯಭಾರಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಡ್ಕರ್ ಸಂಸ್ಥೆಗೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗಿದ್ದು, ನಟ ರಾಕ್ಷಸ ಖ್ಯಾತಿಯ ಡಾಲಿ ಧನಂಜಯ ಅವರು ಲಿಡ್ಕರ್ ಸಂಸ್ಥೆಗೆ ರಾಯಭಾರಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಲಿಡ್ಕರ್ ಸಂಸ್ಥೆಯ ಲೆದರ್ ಬ್ಯಾಗ್ ಬಳಕೆ ಮಾಡುತ್ತಿರುವುದರಿಂದ ಹೆಚ್ಚು ಮುನ್ನೆಲೆಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.