News Headlines 25-12-24 |ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ; CT Ravi ಬಂಧನ: CPI ಅಮಾನತು; ರಾಜ್ಯದ ನಾಲ್ವರು ಯೋಧರು ಹುತಾತ್ಮ; ರಸ್ತೆಗೆ ಸಿದ್ದರಾಮಯ್ಯ ಹೆಸರು: JDS-BJP ಆಕ್ರೋಶ!

1. ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಲಕ್ಷ್ಮಿದೇವಿನಗರ ವಾರ್ಡ್ ನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ತಲೆಗೆ ಮೊಟ್ಟೆ ಎಸೆದಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಮೊಟ್ಟೆ ದಾಳಿ ಕುರಿತಂತೆ ಮುನಿರತ್ನ ಗಂಭೀರ ಆರೋಪ ಮಾಡಿದ್ದು ತನ್ನನ್ನು ಹತ್ಯೆ ಮಾಡಲು ಡಿಕೆ ಶಿಕುಮಾರ್, ಡಿಕೆ ಸುರೇಶ್ ಹಾಗೂ ಹನುಮಂತರಾಯಪ್ಪ ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಇನ್ನು ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ MLC ಸಿಟಿ ರವಿ ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಅವರು ಯಾರು ಮತ್ತು ಯಾಕೆ ಹೀಗೆ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
2. ಪ್ರತ್ಯೇಕ ಅಪಘಾತ: ರಾಜ್ಯದ ನಾಲ್ವರು ಯೋಧರು ಹುತಾತ್ಮ
ಜಮ್ಮು ಕಾಶ್ಮೀರದ ಪೊಂಛ್ ಜಿಲ್ಲೆಯ LOC ಬಳಿ ಕಂದಕಕ್ಕೆ ಸೇನಾ ವಾಹನ ಪಲ್ಟಿಯಾಗಿದ್ದು ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಬೆಳಗಾವಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ, ಕುಂದಾಪುರದ ಬಿಜಾಡಿಯ ಅನೂಪ್, ಮಹಾಲಿಂಗಪುರದ ಮಹೇಶ್ ಮರಿಗೊಂಡ ಹುತಾತ್ಮ ಯೋಧರಾಗಿದ್ದಾರೆ. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಮಣಿಪುರದಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಬೆಳಗಾವಿ ಮೂಲದ ಯೋಧ ಧರ್ಮರಾಜ ಸುಭಾಷ ಖೋತ್ ಮೃತಪಟ್ಟಿದ್ದಾರೆ. ಕರ್ತವ್ಯ ಮುಗಿಸಿಕೊಂಡು ವಾಪಸ್ ಕ್ಯಾಂಪ್ ಗೆ ಬರುವಾಗ ಕಣಿವೆ ಬಳಿ ಭೂಮಿ ಕುಸಿದು ವಾಹನ ಕಂದಕಕ್ಕೆ ಉರುಳಿ ಅಪಘಾತ ಸಂಭವಿಸಿತ್ತು.
3. CT Ravi ಬಂಧನ: CPI ಅಮಾನತು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ ವಿಚಾರ ಸಂಬಂಧ ಬಿಜೆಪಿ MLC ಸಿ.ಟಿ ರವಿ ಅವರನ್ನ ಬಂಧಿಸಿ ಸುತ್ತಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ತಲೆತಂಡವಾಗಿದೆ. ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿದ್ದಕ್ಕೆ ಕರ್ತವ್ಯ ಲೋಪದಡಿ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಿ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಸಿಟಿ ರವಿ ಬಂಧನ ನಂತರ ಬಿಜೆಪಿ ನಾಯರಕನ್ನು ಪೊಲೀಸ್ ಠಾಣೆಯೊಳಗೆ ಬಿಡಲಾಗಿದ್ದು ಅವರೆಲ್ಲಾ ಸಭೆ ಮಾಡಿದ್ದರು. ಈ ವೇಳೆ ಕಮಿಷನರ್ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಇದ್ದರು ಎನ್ನಲಾಗಿದೆ.
4. ರಸ್ತೆಗೆ ಸಿದ್ದರಾಮಯ್ಯ ಹೆಸರು: JDS,BJP ಆಕ್ರೋಶ
ಮೈಸೂರಿನ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವ ಮಹಾನಗರ ಪಾಲಿಕೆ ಪ್ರಸ್ತಾವನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೆಆರ್‌ಎಸ್ ರಸ್ತೆಯ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಹೊರವರ್ತುಲ ರಸ್ತೆ ಜಂಕ್ಷನ್‌ವರೆಗಿನ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ನಾಮಕರಣ ಮಾಡಲು ಪ್ರಸ್ತಾಪಿಸಲಾಗಿದೆ. ಚಾಮರಾಜ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರ ಸಲಹೆಯನ್ನು ಆಧರಿಸಿ, ಮೈಸೂರು ಮಹಾನಗರ ಪಾಲಿಕೆ ಈ ನಿರ್ಧಾರ ತೆಗೆದುಕೊಂಡಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಿವಾಗಿದ್ದು ಮೈಸೂರಿನ ಐತಿಹಾಸಿಕ ನಗರಿ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುತ್ತಿರುವುದು ಖಂಡನೀಯ ಎಂದು ಜೆಡಿಎಸ್ ಹೇಳಿದೆ. ಮತ್ತೊಂದೆಡೆ ವಿಪಕ್ಷ ನಾಯಕ ಆರ್ ಅಶೋಕ್ ಸಹ ಈ ನಿರ್ಧಾರವನ್ನು ಸರಿಯಲ್ಲ ಎಂದು ಹೇಳಿದ್ದರೆ ಅತ್ತ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತ್ರ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಮೈಸೂರಿಗೆ ಸಿದ್ದರಾಮಯ್ಯರ ಕೊಡುಗೆ ಬಹಳ ಇದೆ. ಹೀಗಾಗಿ ಅವರ ಹೆಸರಿಡುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.
5. ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು
ಹಾವೇರಿಯ ಶಿಗ್ಗಾಂವಿ ಬಳಿಯ ತಡಸ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಎಸ್‌ಯುವಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು ಡಿಕ್ಕಿ ಹೊಡೆದ ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು ಚಾಲಕ ಹಾಗೂ ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


