ನನ್ನ ಇಲಾಖೆ ಬಜೆಟ್ ಇರುವುದು 16 ಸಾವಿರ ಕೋಟಿ ರೂ ಮಾತ್ರ; ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಶೀಘ್ರವೇ ಟೆಂಡರ್: ಡಿ.ಕೆ ಶಿವಕುಮಾರ್
ಬೊಮ್ಮಾಯಿ ಅವರ ಸರ್ಕಾರದ ಬಜೆಟ್ ನಲ್ಲಿ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ಅನುದಾನ ನೀಡಿದ್ದರು. ಆದರೆ ನಿಗಮಗಳಲ್ಲಿ 28 ಸಾವಿರ ಕೋಟಿ ಮೊತ್ತದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ಬೆಳಗಾವಿ: ಶೀಘ್ರದಲ್ಲೇ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯರಾದ ಬಿ.ಜಿ. ಪಾಟೀಲ್ ಅವರು ಕಲಬುರ್ಗಿ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಬುಧವಾರ ಗಮನ ಸೆಳೆದರು. ಈ ವೇಳೆ ಮಾತನಾಡಿದ ನೀರಾವರಿ ಸಚಿವರೂ ಆದ ಶಿವಕುಮಾರ್ ಅವರು, “ಬಿ.ಜಿ. ಪಾಟೀಲ್ ಅವರ ಬೇಡಿಕೆ ಸರಿಯಾಗಿದೆ. ಬೊಮ್ಮಾಯಿ ಅವರ ಸರ್ಕಾರದ ಬಜೆಟ್ ನಲ್ಲಿ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ಅನುದಾನ ನೀಡಿದ್ದರು. ಆದರೆ ನಿಗಮಗಳಲ್ಲಿ 28 ಸಾವಿರ ಕೋಟಿ ಮೊತ್ತದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೆಲಸ ಮಾಡಿಸಿ ಬಿಲ್ ಪಾವತಿ ಮಾಡದಿದ್ದರೆ ಅನಗತ್ಯ ಒತ್ತಡ ಬೀಳಲಿದೆ. ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾಗಿರುವ 5400 ಕೋಟಿ ಹಣ ಬಂದಿಲ್ಲ. ಹೀಗಾಗಿ ನಮ್ಮ ಬಜೆಟ್ ನಲ್ಲಿ ಇದನ್ನು 16 ಸಾವಿರ ಕೋಟಿಗೆ ಇಳಿಸಲಾಗಿದೆ. ಕೋಲಾರದ ಎತ್ತಿನ ಹೊಳೆ ಯೋಜನೆ ಪರಿಸ್ಥಿತಿಯೂ ಹೀಗೆ ಇದೆ. ತುಮಕೂರಿಗೆ ನೀರು ಬರುವವರೆಗೂ ಕಾಮಗಾರಿ ಕೈಗೆತ್ತಿಕೊಳ್ಳದಂತೆ ತಡೆಹಿಡಿಯಲಾಗಿದೆ ಎಂದರು.
ಮೊನ್ನೆಯಷ್ಟೇ ಕೃಷ್ಣ ಮೇಲ್ದಂಡೆ ಯೋಜನೆ ವಿಚಾರವಾಗಿ ನಮ್ಮ ಮೇಲೆ ಒತ್ತಡ ಹಾಕಿದ್ದಾರೆ. ಈಗಾಗಲೇ ರಾಜ್ಯದಲ್ಲಿ 1.50 ಲಕ್ಷ ಕೋಟಿ ಮೊತ್ತದ ನೀರಾವರಿ ಯೋಜನೆ ಕೆಲಸಗಳು ನಡೆಯುತ್ತಿವೆ. ಆದರೆ ನನ್ನ ಇಲಾಖೆ ಬಜೆಟ್ ಇರುವುದು 16 ಸಾವಿರ ಕೋಟಿ ಮಾತ್ರ, ಇದರಲ್ಲಿ ಶೇ.50 ರಷ್ಟು ಹಣ ಹಳೆ ಸಾಲಕ್ಕೆ ಪಾವತಿಯಾಗುತ್ತಿದೆ. ಶೇ.25 ಹಣ ಭೂಸ್ವಾಧೀನ ಪ್ರಕ್ರಿಯೆಗೆ ಹೋಗುತ್ತದೆ. ಇನ್ನು ಶೇ.25 ಹಣ ಮಾತ್ರ ಉಳಿಯುತ್ತದೆ. ಈ ಯೋಜನೆ ನಮ್ಮ ಗಮನದಲ್ಲಿದೆ. ನಿಮ್ಮ ಕಾಲದಲ್ಲಿ 130 ಕೋಟಿ ವೆಚ್ಚದ ಈ ಯೋಜನೆಗೆ ಅನುಮತಿ ನೀಡಲಾಗಿದ್ದು, ನಾವು ಮಾತು ಕೊಟ್ಟಿದ್ದು, ಈ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳುತ್ತೇವೆ” ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



