News Headlines 19-12-24 | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ: ಸಿಟಿ ರವಿ ಬಂಧನ; ನಿಮ್ಮ ತಾಯಿನೂ ಒಂದು ಹೆಣ್ಣು: ಹೆಬ್ಬಾಳ್ಕರ್ ಆಕ್ರೋಶ; ಅಮಿತ್ ಶಾ ಗುಜರಿ ವ್ಯಾಪಾರಿ ಆಗ್ತಿದ್ರು!

1. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ: ಸಿಟಿ ರವಿ ಬಂಧನ
ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅವಹೇನಕಾರಿ ಹೇಳಿಕೆ ಖಂಡಿಸಿ ಇಂದು ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಶಾಸಕರು ಸುವರ್ಣಸೌಧದ ತಮ್ಮ ಕುರ್ಚಿಗಳ ಮುಂದೆ ಅಂಬೇಡ್ಕರ್ ಅವರ ಫೋಟೋವನ್ನು ಪ್ರದರ್ಶಿಸಿದರು. ಶೂನ್ಯ ಅವಧಿಯಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಆಡಳಿತ ಸದಸ್ಯರು ಅಮಿತ್ ಶಾ ಅವರನ್ನು ಬಂಧಿಸಿ, ರಾಜೀನಾಮೆ ಪಡೆಯುವಂತೆ ಆಗ್ರಹಿಸಿದರು. ಇದೇ ವೇಳೆ, ಬಿಜೆಪಿ ಸದಸ್ಯರು ಕೂಡ ಅಂಬೇಡ್ಕರ್ ಭಾವಚಿತ್ರ ಹಿಡಿದು, ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಗೆ ಭಾರತ ರತ್ನ ನೀಡಲಿಲ್ಲ ಎಂದು ಆರೋಪಿಸಿದರು. ಈ ನಡುವೆ, ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದು ಸಿ.ಟಿ ರವಿ ಆರೋಪಿಸಿದರು. ಇದಕ್ಕೆ ಕೌಂಟರ್ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀವು ರಸ್ತೆ ಅಪಘಾತದಲ್ಲಿ ಇಬ್ಬರನ್ನು ಕೊಲೆ ಮಾಡಿದ್ದೀರಿ, ಹಾಗಾಗಿ, ನೀವು ಕೊಲೆಗಾರರು ಎಂದು ದೂರಿದರು. ಇದರಿಂದ ರೊಚ್ಚಿಗೆದ್ದ ಸಿಟಿ ರವಿ ಅಶ್ಲೀಲ ಪದ ಬಳಸಿ, ನಿಮ್ಮನ್ನು ಹಾಗೆ ಕರೆಯೋಕೆ ಆಗುತ್ತಾ ಎಂದರು. ಇದರಿಂದ ಆಕ್ರೋಶಗೊಂಡ ಹೆಬ್ಬಾಳ್ಕರ್ ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳು ಇಲ್ಲವೇ? ನಿಮ್ಮ ತಾಯಿನೂ ಒಂದು ಹೆಣ್ಣು? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಆಡಳಿತ ಪಕ್ಷದ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ, ಸಿಟಿ ರವಿ ವಿರುದ್ಧ ದೂರು ನೀಡಿದ್ದು, ಅವರನ್ನು ಸದಸ್ಯ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಈಮಧ್ಯೆ, ಬೆಳಗಾವಿಯ ಸುವರ್ಣಸೌಧದ ಮೊಗಸಾಲೆಯಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ವಿಧಾನಪರಿಷತ್ನ ಕಾರಿಡಾರ್ನಲ್ಲಿ ಹೋಗುತ್ತಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಗಲಿಗರು ಏಕಾಏಕಿ ಸಿಟಿ ರವಿಗೆ ಅಡ್ಡ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ಕೂಡಲೇ ಮಾರ್ಷಲ್ಗಳು ಅವರನ್ನು ತಡೆದಿದ್ದಾರೆ. ಸಿಟಿ ರವಿ ಹೇಳಿಕೆ ವಿಧಾನಪರಿಷತ್ ನಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಅನಿರ್ಧಿಷ್ಟಾವದಿಗೆ ಮುಂದೂಡಿದ್ದಾರೆ.
2. ಸಿಟಿ ರವಿ ರುದ್ಧ ಎಫ್ಐಆರ್
ಸದನದೊಳಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇಲೆಗೆ ಬಿಜೆಪಿ ಎಂಎಲ್ಸಿ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವಾಚ್ಯಪದ ಬಳಕೆ ಆರೋಪದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮದೇ ಲೆಟರ್‌ಹೆಡ್ ಮೇಲೆ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ವಿರುದ್ಧ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಸಿಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
3. ಅಮಿತ್ ಶಾ ಗುಜರಿ ವ್ಯಾಪಾರಿ ಆಗ್ತಿದ್ರು
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಬಗ್ಗೆ ಗೃಹ ಸಚಿವ ಅಮಿತ್ ಶಾ ಆಡಿರುವ ಮಾತುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂಬೇಡ್ಕರ್ ಸಂವಿಧಾನ ಇಲ್ಲದಿದ್ದರೆ ಅಮಿತ್ ಶಾ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗಿತ್ತು. ಸಭಾಪತಿ ಜಗದೀಪ್ ಧಂಕರ್ ಸಂವಿಧಾನಡಿ ನಿಜವಾಗಿಯೂ ಕಾರ್ಯನಿರ್ವಹಿಸುತ್ತಿದ್ದರೆ ಕೂಡಲೇ ಅಮಿತ್ ಶಾ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅಶ್ಲೀಲ ಪದ ಬಳಕೆಯನ್ನು ಸಿಎಂ ಸಿದ್ದರಾಮಯ್ಯ ಕ್ರಿಮಿನಲ್ ಅಪರಾಧ ಎಂದು ಕರೆದಿದ್ದಾರೆ. ಅಲ್ಲದೆ ಈ ಸಂಬಂಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
4. ಗ್ರಾಹಕ ಆತ್ಮಹತ್ಯೆ: ಬ್ಯಾಂಕ್ ಮುಖ್ಯಸ್ಥ ಅನಿಲ್ ಲೊಬೊ ಬಂಧನ
ಗೃಹ ಸಾಲ ಮರು ಪಾವತಿಸಲಾಗದೆ 47 ವರ್ಷದ ಗ್ರಾಹಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಮುಖ್ಯಸ್ಥ ಅನಿಲ್ ಲೊಬೊರನ್ನು ಪೊಲೀಸರು ಬಂಧಿಸಿದ್ದಾರೆ. ಅನಿಲ್ ಲೊಬೊ ಅವರ ಕಿರುಕುಳದಿಂದ ಬೇಸತ್ತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋ ರೆಕಾರ್ಡ್ ಮಾಡಿ ಪೆರ್ಮಂಕಿ ಗ್ರಾಮದ ಮನೋಹರ್ ಪಿರೇರಾ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಮೃತನ ಸಹೋದರ ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


