SM Krishna: 'ಕೆಂಪೇಗೌಡರಂತೆ ಎಸ್‌ಎಂ ಕೃಷ್ಣ ಪುತ್ಥಳಿ ನಿರ್ಮಾಣ ಮಾಡಿ'- ಗಾಲಿ ಜನಾರ್ಧನ ರೆಡ್ಡಿ
ಕೆಂಪೇಗೌಡರು ಬೆಂಗಳೂರು ಕಟ್ಟಿದ್ರು. ಎಸ್ ಎಂ ಕೃಷ್ಣ ಆಧುನಿಕ ಬೆಂಗಳೂರು ಮಾಡಿದ್ರು. ಕೆಂಪೇಗೌಡರ ಪ್ರತಿಮೆ ಅಂತರಾಷ್ಟ್ರೀಯ ನಿಲ್ದಾಣದ ಬಳಿ ನಿರ್ಮಾಣವಾಗಿದೆ...

ಬೆಂಗಳೂರು: ಕರ್ನಾಟಕಕ್ಕೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಕೊಡುಗೆ ಅಪಾರವಾಗಿದ್ದು, ಕೆಂಪೇಗೌಡರಂತೆ ಅವರ ಪುತ್ಥಳಿಯನ್ನೂ ನಿರ್ಮಾಣ ಮಾಡಬೇಕು ಎಂದು ಬಿಜೆಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇಂದು ಇಹಲೋಕ ತ್ಯಜಿಸಿದ ಎಸ್ ಎಂ ಕೃಷ್ಣ ಅವರಿಗೆ ಸಂತಾಪ ಸೂಚಿಸಿರುವ ಜನಾರ್ಧನ ರೆಡ್ಡಿ, 'ಕೆಂಪೇಗೌಡರು ಬೆಂಗಳೂರು ಕಟ್ಟಿದ್ರು. ಎಸ್ ಎಂ ಕೃಷ್ಣ ಆಧುನಿಕ ಬೆಂಗಳೂರು ಮಾಡಿದ್ರು. ಕೆಂಪೇಗೌಡರ ಪ್ರತಿಮೆ ಅಂತರಾಷ್ಟ್ರೀಯ ನಿಲ್ದಾಣದ ಬಳಿ ನಿರ್ಮಾಣವಾಗಿದೆ. ಅದೇ ರೀತಿ ಎಸ್ ಎಂ ಕೃಷ್ಣ ಅವ ಪುತ್ಥಳಿ ನಿರ್ಮಿಸಬೇಕು. ಆಗ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ' ಎಂದು ಹೇಳಿದ್ದಾರೆ.
‘ಕರ್ನಾಟದ ಮುಖ್ಯಮಂತ್ರಿಗಳಾಗಿ, ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮತ್ತು ಭಾರತದ ರಾಜಕಾರಣದಲ್ಲಿ ಇನ್ನೂ ಅನೇಕ ಜವಾಬ್ದಾರಿಗಳನ್ನು ವಹಿಸಿ ಛಾಪು ಮೂಡಿಸಿದ್ದ ಹಾಗೂ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಎಸ್.ಎಂ.ಕೃಷ್ಣ ರವರ ನಿಧನದ ಸುದ್ದಿ ದುಃಖ ತರಿಸಿದೆ.
ಸನ್ಮಾನ್ಯ ಎಸ್.ಎಂ ಕೃಷ್ಣರವರು ರಾಜ್ಯದಲ್ಲಿ ಮೋಡ ಬಿತ್ತನೆ, ಐಟಿ ಕ್ಯಾಪಿಟಲ್ ಗರಿಯ ಹಿಂದಿನ ರೂವಾರಿಗಳಾಗಿ, ಇಸ್ಕಾಂ ರಚನೆಯ ಮೂಲಕ ವಿದ್ಯುತ್ ಕ್ರಾಂತಿ ಸೃಷ್ಟಿಸಿ, ಕೃಷಿ ಡಿಜಿಟಲೀಕರಣದ ಪಿತಾಮಹರಾಗಿ, ಹೊಸ ಕಾರ್ಮಿಕ ನೀತಿ ರೂಪಿಸಿ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಪರಿಚಯಿಸಿದ, ಆಧುನಿಕ ದೂರದೃಷ್ಟಿಯ ನಾಯಕರಾಗಿ ಅಂದಿನ ಇಂದಿನ ಪೀಳಿಗೆಯ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ, ನಾಡಿಗೆ ಅಪಾರ ಕೊಡುಗೆ ನೀಡಿರುವ ಧೀಮಂತ ನಾಯಕರಾಗಿದ್ದಾರೆ.
ನಾನು ಈ ರಾಜ್ಯದ ಪ್ರವಾಸೋದ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ 500 ವರ್ಷದ ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕ ಮಹೋತ್ಸವದ ಕಾರ್ಯಕ್ರಮವನ್ನು ಹಂಪಿ ಮಾತ್ರವಲ್ಲದೆ ದೆಹಲಿಯಲ್ಲೂ ಕಾರ್ಯಕ್ರಮ ಆಯೋಜಿಸಿದ್ದೆ. ಆ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ಸನ್ಮಾನ್ಯ ಎಸ್.ಎಂ ಕೃಷ್ಣ ಅವರು ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ನಾಲ್ಕು ಗಂಟೆಗಳ ಕಾಲ ಕಾರ್ಯಕ್ರಮವನ್ನು ನನ್ನೊಟ್ಟಿಗೆ ವೀಕ್ಷಣೆ ಮಾಡಿದ್ದು ಎಂದು ಮರೆಯಲಾಗದು. ಅವರ ರಾಜಕೀಯ ಅನುಭವಗಳನ್ನು ನನ್ನೊಟ್ಟಿಗೆ ಹಂಚಿಕೊಂಡ ಕ್ಷಣಗಳು ಜನ ಸೇವೆಯಲ್ಲಿ ತೊಡಗಿರುವ ನನಗೆ ಮಾರ್ಗದರ್ಶನದ ನುಡಿಗಳಾಗಿವೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ‘ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




